ಬಂಟ್ವಾಳ, ಮೇ ೨೭: ಯೂತ್ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ, ದ.ಕ. ಕ್ಷೇತ್ರದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಿಥುನ್ ರೈಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಹಾಗೂ ಕೊಲೆ ಬೆದರಿಕೆವೊಡ್ಡಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಬಂಟ್ವಾಳ ಕಾಂಗ್ರೆಸ್ ಸಮಿತಿಯು ಸೋಮವಾರ ಪೊಲೀಸ್ ದೂರು ನೀಡಿದೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಅವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ಈ ದೂರು ನೀಡಿದ್ದು, ತಪ್ಪಿತಸ್ಥರನ್ನು ಕಾನೂನು ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.
ದೂರಿನಲ್ಲೇನಿದೆ?:
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಜಂಕ್ಷನ್‌ನಲ್ಲಿ ಮೇ ೨೩ರಂದು ರಾತ್ರಿ ಬಿಜೆಪಿ ಬಡಕಬೈಲ್ ಸಮಿತಿಯು ವಿಜಯೋತ್ಸವ ಹಮ್ಮಿಕೊಂಡಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರು, ಮಿಥುನ್ ರೈ ಅವರಿಗೆ ಅವಾಚ್ಯ ಶಬ್ಬಗಳಿಂದ ನಿಂದಿಸಿದಲ್ಲದೆ, ಕೊಲೆ ಬೆದರಿಕೆಯನ್ನು ಒಡ್ಡಿ, ಬಳಿಕ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದರಿಂದ ಮಿಥುನ್ ಅವರ ಘನತೆಗೆ ಧಕ್ಕೆ ಉಂಟಾಗಿದ್ದಲ್ಲದೆ, ಎರಡು ಪಕ್ಷಗಳ ನಡುವೆ ಸಂಘರ್ಷ, ಶಾಂತಿ ಸುವ್ಯವಸ್ಥೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಶಾಂತಿ ಕದಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಅವರು ಪೊಲೀಸ್ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಈ ಸಂಬಂಧ ಬಂಟ್ವಾಳ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತಿದ್ದಾರೆ.
