ಬಂಟ್ವಾಳ: ಮಿತ್ತ ಪೆರಾಜೆ ಶ್ರೀ ಗುಡ್ಡೆಚಾಮುಂಡಿ ದೈವದ ವರ್ಷಾವಧಿ ವಲಸರಿ ಜಾತ್ರೆ ಬುಧವಾರ ರಾತ್ರಿ ನಡೆಯಿತು. ಪೆರಾಜೆ ಗ್ರಾಮದಲ್ಲಿ ನಡೆಯುವ ಕೊನೆಯ ಜಾತ್ರೆಯಾದ ಮಿತ್ತಪೆರಾಜೆ ವಲಸರಿ ಜಾತ್ರೆಯಲ್ಲಿ ಊರಿನ ಹಾಗೂ ಪರ ಊರ ಭಕ್ತರ ಪಾಲ್ಗೊಂಡು ದೈವದ ಗಂಧ ಪ್ರಸಾದ ಸ್ವೀಕರಿಸಿದರು.
ಎ.18 ರಂದು ಪೆರಾಜೆ ಗುತ್ತುವಿನ ಮನೆಯಲ್ಲಿ ಪೂರ್ವ ಕಟ್ಟುಕಟ್ಟಲೆಗಳಂತೆ ಧಾರ್ಮಿಕ ವಿಧಿವಿಧಾನಗಳ ಬಳಿಕ ಗೊನೆ ಕಡಿದು ಎ.24 ರಂದು ರಾತ್ರಿ ಭಂಡಾರಿ ಬಂದು ಬಳಿಕ ದೈವದ ವಲಸರಿ ನೇಮ ನಡೆಯಿತು.

ಕಂಬಳದ ಗದ್ದೆಗೆ ದೈವ ಇಳಿದು ಗದ್ದೆಯ ಕೊನೆಯಲ್ಲಿರುವ ಕಟ್ಟೆಯ ಸುತ್ತ ಮೂರು ಸುತ್ತು ಬಂದು ಬಳಿಕ ಗದ್ದೆಯಿಂದ ವಲಸರಿ ಮೇಲೆ ಬರುವ ವೇಳೆ ಭಕ್ತರು ಹಾಕಿದ ಧರಿಗುಂಟದ ಬಳಿ ನಿಂತು ದೈವ ಭಕ್ತರಿಗೆ ಅಭಯ ನೀಡುತ್ತದೆ, ಆ ಸಮಯದಲ್ಲಿ ದೈವಕ್ಕೆ ಧರಿಗುಂಟ ಹಾಕಿದ ಭಕ್ತರು ಸೀಯಾಳ ಹಿಡಿಯುತ್ತಾರೆ.
ಕೊನೆಯ ನೇಮ ಇದಾಗಿರುವುದರಿಂದ ಗ್ರಾಮದಲ್ಲಿನ ಭಕ್ತರ ಸಮಸ್ಯೆ ಗಳಿಗೆ ಇತ್ಯರ್ಥ ಮಾಡಲು ಇಲ್ಲಿ ಅವಕಾಶ ಗಳಿರುತ್ತದೆ.
ಈ ನೇಮದಲ್ಲಿ ದೈವದ ನುಡಿಗೆ ಬಹಳ ಪ್ರಾಮುಖ್ಯತೆ ಇದ್ದು ಭಕ್ತರು ಭಯಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಅದೇ ದಿನ ಸಂಜೆಯಿಂದ ನೇಮ ನಡೆಯುವ ಜಾಗದ ಬಳಿಯಲ್ಲಿ ಸಭಾ ಕಾರ್ಯಕ್ರಮ ಹಾಗೂ ಪುಟಾಣಿ ಮಕ್ಕಳಿಂದ ಮನೋರಂಜನೆ ಹಾಗೂ ನಾಟಕ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅಗಮಸಿ ಪ್ರಸಾದ ಸ್ವೀಕರಿಸಿದರು.