ನಮ್ಮ ದೇಶದಲ್ಲಿ ಸಂತರು, ಬ್ರಾಹ್ಮಣರು, ಮುತ್ತೈದೆಯರು ಜೀವನ ಸಂಸ್ಕೃತಿಯ ಬೋಧಕರು. ನೈತಿಕ ಮೌಲ್ಯ, ಧಾರ್ಮಿಕತೆಯ ಮಹತ್ವವನ್ನು ಸರಿಯಾಗಿ ಅರ್ಥೈಸದ ಯುವ ಜನಾಂಗ ಮಾದಕ ವಸ್ತು, ಅಮಲು ಸೇವನೆಗಳಂತಹ ದುಶ್ಚಟಗಳ ದಾಸರಾಗುತ್ತಿರುವುದು ಖೇದನೀಯ. ಪರಿಶುದ್ಧ ಮನಸ್ಸಿನ ವ್ಯಕ್ತಿಗಳಿಂದ ಸತ್ಕರ್ಮಗಳು ನಡೆಯುತ್ತವೆ ಎಂದು ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಅವರು ಭಾನುವಾರ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ ಒಂದು ಮಂಡಲ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಾತೆಯ ಮೂಲಕ ಸಿಗಲ್ಪಡುವ ಜೀವನ ಪಾಠ ಅತ್ಯಂತ ಪರಿಣಾಯಮಕಾರಿಯಾಗಿರುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಂಟ್ವಾಳದ ವಕೀಲ ರಾಜಾರಾಮ ನಾಯ್ಕ್ ಮಾತನಾಡಿ ಮಾಣಿಲ ಶ್ರೀಯವರಂತೆ ದೇಶ, ಸಮಾಜ, ಪ್ರಕೃತಿಯ ಹಿತ ಚಿಂತನೆಯ ಸಂತರುಗಳು ಶ್ರೇಷ್ಠರೆನಿಸಿದ್ದಾರೆ. ಪರಿಸರದ ಮೇಲೆ ನಾವು ನಡೆಸುತ್ತಿರುವ ದಬ್ಬಾಳಿಕೆ, ಅತ್ಯಾಚಾರದಿಂದಲೇ ಋತುಮಾನಗಳಲ್ಲಿ ಘಟಿಸಬೇಕಾದ ವ್ಯವಸ್ಥೆಗಳು ವ್ಯತ್ಯಾಸವಾಗಿದೆ ಎಂದರು.
ಸಮಾರಂಭದಲ್ಲಿ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಚಂದ್ರಶೇಖರ್ ತುಂಬೆ, ದೇವದಾಸ ಆಳ್ವ ಕುಂಬ್ಳೆ,
ನವೋದಯ ಸ್ವ-ಸಹಾಯ ಗುಂಪುಗಳ ಮೇಲ್ವಿಚಾರಕ ಉದಯ ಎಂ. ಪೆರುವಾಯಿ ಭಾಗವಹಿಸಿದ್ದರು.
ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ, ಸ್ವಾಗತಿಸಿದರು. ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಮಂಜು ವಿಟ್ಲ ಪ್ರಸ್ತಾವಿಸಿದರು. ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಕಾರ್‍ಯದರ್ಶಿ ಗೀತಾ ಕಾರ್‍ಯಕ್ರಮ ನಿರೂಪಿಸಿದರು. ಸದಸ್ಯೆ ವಸಂತಿ ಶೆಟ್ಟಿ ವಂದಿಸಿದರು.
ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ಗಣಪತಿ ಹವನ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀಗುರುಪೂಜೆ, ಬಾಲಭೋಜನ, ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಕನಕಧಾರಾ ಯಾಗ, ಸಾಮೂಹಿಕ ಕುಂಕುಮಾರ್ಚನೆ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಶ್ರೀದುರ್ಗಾ ಪೂಜೆ, ಆಶ್ಲೇಷ ಬಲಿ, ಶ್ರೀ ವಿಠೋಭರುಕ್ಮಿಣಿ ಧ್ಯಾನ ಮಂದಿರದಲ್ಲಿ ಭಜನಾ ಸಂಕೀರ್ತನೆ, ಶ್ರೀಲಕ್ಷ್ಮೀ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

