ಮಂಗಳೂರು: ವೃದ್ದ ಮಾವನಿಗೆ ಸೊಸೆಯೊಬ್ಬರು ಮನೆಯಲ್ಲಿ ಮನಸೋ ಇಚ್ಛೆ ಥಳಿಸಿದ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದ್ದು, ಸೊಸೆಯ ಈ ಕೃತ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

76 ವರ್ಷದ ಪದ್ಮನಾಭ ಸುವರ್ಣ ಹಲ್ಲೆಗೊಳಗಾದವರು. ಸೊಸೆ ಉಮಾ ಶಂಕರಿ ಅವರು ಹಲ್ಲೆ ಆರೋಪಿ ಎಂದು ತಿಳಿದುಬಂದಿದೆ.
ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿರುವ ಸೊಸೆ ಉಮಾಶಂಕರಿ ಅವರು ವಾಕ್ ಸ್ಟಿಕ್ ನಲ್ಲಿ ಹಲ್ಲೆ ಮಾಡಿದ್ದಾರೆ. ಉಮಾಶಂಕರಿ ಅವರ ಪತಿ ಪ್ರೀತಂ ಸುವರ್ಣ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ಪ್ರೀತಂ ಸುವರ್ಣ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಗಾಯಾಳು ಪದ್ಮನಾಭ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ತಂದೆಗೆ ಥಳಿಸಿದ ಉಮಾ ಶಂಕರಿ ವಿರುದ್ಧ ಪದ್ಮನಾಭ ಸುವರ್ಣರ ಮಗಳು ಪ್ರಿಯಾ ಸುವರ್ಣ ದೂರು ನೀಡಿದ್ದಾರೆ. ಸಿಸಿಟಿವಿ ವಿಡಿಯೋ ಆಧಾರವಾಗಿರಿಸಿ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ದೂರು ದಾಖಲು ಮಾಡಲಾಗಿದೆ