ಉಳ್ಳಾಲ: ಪತ್ನಿಯ ಸಾವಿನ ಸುದ್ಧಿ ತಿಳಿದ ಕೆಲವೇ ನಿಮಿಷಗಳಲ್ಲಿ ಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಚಾವಡಿಯಲ್ಲಿ ನಡೆದಿದೆ.

ಗ್ರಾಮಚಾವಡಿ ನಿವಾಸಿ ಮೀನಾಕ್ಷಿ ಪೂಜಾರಿ ಮತ್ತು ಅವರ ಪತಿ ತೊಕ್ಕೊಟ್ಟು ಒಳಪೇಟೆ ನಿವಾಸಿ ಪ್ರಸ್ತುತ ಗ್ರಾಮಚಾವಡಿಯಲ್ಲಿ ವಾಸವಾಗಿರುವ ಶೇಷಪ್ಪ ಪೂಜಾರಿ ಮೃತರು.
ಮೀನಾಕ್ಷಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಮೀನಾಕ್ಷಿ ಆವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಪತಿ ಶೇಷಪ್ಪ ಪೂಜಾರಿ ಮತ್ತು ಅವರ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ ಮನೆಗೆ ವಾಪಾಸ್ಸಾಗಿದ್ದ ಶೇಷಪ್ಪ ಪೂಜಾರಿ ಅವರು ಬುಧವಾರ ಬೆಳಗ್ಗಿನಿಂದಲೇ ಪತ್ನಿಯ ಅನಾರೋಗ್ಯದಿಂದ ಚಿಂತಿತರಾಗಿದ್ದರು. ಬೆಳಗ್ಗೆ ವಾಪಾಸ್ ಆಸ್ಪತ್ರೆಗೆ ತೆರಳಿ ಸಂಜೆ ವಾಪಾಸ್ ಆಗಿದ್ದರು. ಸಂಜೆ ವೇಳೆಗೆ ಶೇಷಪ್ಪ ಆವರು ಮನೆಯೊಳಗಿದ್ದ ಸಂದರ್ಭದಲ್ಲಿ ಮೀನಾಕ್ಷಿ ಅವರ ಸಾವಿನ ಸುದ್ಧಿಯನ್ನು ಸಂಬಂಧಿಕರೊಬ್ಬರು ತಿಳಿಸಿ ಪಕ್ಕದ ಅಂಗಡಿಗೆ ತೆರಳಿ ವಾಪಾಸಾದಾಗ ಶೇಷಪ್ಪ ಅವರು ಕೀಟನಾಶಕವನ್ನು ಕುಡಿದಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಶಾಲಾ ಬಸ್ ಡ್ರೈವರ್ ಆಗಿದ್ದ ಈತನಿಗೆ ಮಕ್ಕಳಿರಲಿಲ್ಲ. ಈ ಕೊರಗು ಅನೇಕ ವರ್ಷಗಳಿಂದ ದಂಪತಿಯನ್ನು ಹೆಚ್ಚು ಕಾಡಿತ್ತು.