ವಿಟ್ಲ: ವಿಟ್ಲದ ಮಂಗಳಪದವು-ಅನಂತಾಡಿ ರಸ್ತೆ ಅಭಿವೃದ್ಧಿಗೆ ಮಾಜಿ ಶಾಸಕಿಯ ಪ್ರಸ್ತಾವನೆ ಮೂಲಕ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆಗೊಂಡಿದ್ದು, ಅದನ್ನು ಬಿಜೆಪಿಯವರು ಕೇಂದ್ರ ಸರಕಾರದ ಅನುದಾನ ಎಂದು ಬಿಂಬಿಸುವ ಮೂಲಕ ಬ್ಯಾನರ್ ರಾಜಕೀಯ ಮಾಡುತ್ತಿದೆ ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ತಿಳಿಸಿದ್ದಾರೆ.
ಅವರು ಶುಕ್ರವಾರ ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿಟ್ಲ ಕಸಬಾ ವ್ಯಾಪ್ತಿಯ ಮಂಗಳಪದವು ಅನಂತಾಡಿ ರಸ್ತೆಯ ಎರಡು ಕಿರು ಸೇತುವೆಗಳಿಗೆ ಈಗಾಗಲೇ ನಬಾರ್ಡ್ ಯೋಜನೆಯಡಿಯಲ್ಲಿ ಒಂದು ಕೋಟಿ ರೂ. ಅನುದಾನ ಬಿಡುಗಡೆಗೊಂಡು ಶಿಲಾನ್ಯಾಸ ನಡೆಸಲಾಗಿದೆ. ಆದರೆ ಈ ಕಾರ್‍ಯಕ್ರಮ ಹಾಗೂ ಅನುದಾನ ಬಿಜೆಪಿ ಶಾಸಕರದ್ದು ಎಂದು ಬಿಂಬಿಸಿ ಮಾಜಿ ಶಾಸಕರನ್ನು ಹಾಗೂ ಮಾಜಿ ಸಚಿವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ರೀತಿಯಲ್ಲಿ ಬಿಂಬಿಸಲಾಗಿದೆ. ಈ ಯೋಜನೆ ಆಗಸ್ಟ್ ೨೦೧೮ರಂದು ಆದೇಶಗೊಂಡು ಟೆಂಡರ್ ನಂತರ ಆಗಿರುತ್ತದೆ. ಯಾವುದೇ ಯೋಜನೆಗಳು ಪ್ರಸ್ತಾವನೆಗೊಂಡು ಅದು ಅನುಮೋದನೆ ದೊರಕುವ ಸಮಯ ಸುಮಾರು ಒಂದೂವರೆ ವರ್ಷ ತಗುಲುತ್ತದೆ. ಈ ಯೋಜನೆಯು ನಮ್ಮ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಪ್ರಸ್ತಾವನೆಯಾಗಿರುತ್ತದೆ. ನಂತರ ಚುನಾವಣೆಯಿಂದ ಆಗಸ್ಟ್‌ನಲ್ಲಿ ಅನುಮೋದನೆಗೊಂಡಿದೆ. ಆದರೆ ಈ ಯೋಜನೆ ಪೂರ್ತಿ ನಬಾರ್ಡ್‌ನದು ಆಗಿರುತ್ತದೆ. ಆದರೆ ಸ್ಥಳೀಯ ಬಿಜೆಪಿ ಕಾರ್‍ಯಕರ್ತರು ಈ ಕಾರ್‍ಯಕ್ರಮವನ್ನು ಕೇಂದ್ರ ರಸ್ತೆ ನಿಧಿ ಎಂದು ಬಿಂಬಿಸಲು ಮುಂದಾಗಿರುವುದು ಮಾತ್ರ ಹಾಸ್ಯಾಸ್ಪದವಾಗಿದೆ. ಅದರಲ್ಲೂ ಕೇಂದ್ರ ರಸ್ತೆ ನಿಧಿಯೂ ಪೂರ್ತಿ ಕೇಂದ್ರ ಸರಕಾರದ ಯೋಜನೆಯಲ್ಲ ಎಂಬ ಕನಿಷ್ಠ ಪರಿಜ್ಞಾನವೂ ಅವರಿಗಿಲ್ಲ. ರಾಜ್ಯದಲ್ಲಿ ಮಾರಾಟವಾಗುವ ತೈಲಬೆಲೆಯ ಶೇ.2ರಷ್ಟು ಕೇಂದ್ರ ರಸ್ತೆ ನಿಧಿಗೆ ವಿನಿಯೋಗವಾಗುತ್ತದೆ. ಈ ರಸ್ತೆ ನಿಧಿಯನ್ನು ಸ್ಥಳೀಯ ಶಾಸಕರ ಪ್ರಸ್ತಾವನೆ ಸಲ್ಲಿಸಿದ ಕೆಲಸಕ್ಕೆ ಮೀಸಲಿಡುತ್ತಾರೆ. ಜನರು ದಡ್ಡರಲ್ಲ ಎಂಬುದಾಗಿ ವ್ಯಕ್ತಪಡಿಸಲು ಈ ಮಾಹಿತಿಯನ್ನು ದಾಖಲೆ ಸಹಿತ ನೀಡುತ್ತಿದ್ದೇವೆ. ಇದರಿಂದ ಬಿಜೆಪಿ ಕಾರ್‍ಯಕರ್ತರ ಬಣ್ಣ ಬಯಲಾಗಿದೆ ಎಂದು ಹೇಳಿದರು.
ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 1.75 ಕೋಟಿ ರೂ. ಕಾಮಗಾರಿಗೆ ಟೆಂಡರ್ ಆಗಿದೆ. ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಕಟ್ಟಡ ಮಾರ್ಚ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಅದೇ ರೀತಿ ಕಳೆದ ವರ್ಷ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಬದನಾಜೆ ಪರಿಯಾಲ್ತಡ್ಕ ರಸ್ತೆಗೆ 1.25 ಲಕ್ಷ ರೂ. ಡಾಂಬರೀಕರಣಕ್ಕೆ ಶಂಕುಸ್ಥಾಪನೆ ಮಾಡಿದ ಕೂಡಲೇ ಸಂಸದರ ವಿಶೇಷ ಪ್ರಯತ್ನದಿಂದ 10 ಕೋಟಿ ರೂ. ಅನುದಾನ ಇಟ್ಟಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು 14 ಬ್ಯಾನರ್ ಅಳವಡಿಸಿದ್ದರು. ಇದುವರೆಗೂ ಹಣ ಬಂದಿಲ್ಲ. ರಸ್ತೆ ಅಭಿವೃದ್ಧಿಗೊಂಡಿಲ್ಲ. ಬ್ಯಾನರ್‌ನಲ್ಲಿ ಮಾತ್ರ ಅಭಿವೃದ್ಧಿಪಡಿಸಿದ್ದಾರೆ. ನಮ್ಮ ಶಾಸಕರ ಪ್ರಯತ್ನದಲ್ಲಿ ಬಿಡುಗಡೆಗೊಂಡ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಅಬ್ದುರಹಿಮಾನ್ ನೆಲ್ಲಿಗುಡ್ಡೆ, ಅಬೂಬಕ್ಕರ್ ಒಕ್ಕೆತ್ತೂರು, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿಕೆಎಂ ಅಶ್ರಫ್, ಅಶೋಕ್ ಕುಮಾರ್ ಮಚ್ಚ ಉಪಸ್ಥಿತರಿದ್ದರು.

