ಬಂಟ್ವಾಳ : ರಾಜ್ಯದಲ್ಲಿ ಕೆಲವು ದಿನಗಳಿಂದ ಅನಧಿಕೃತ ದೇವಸ್ಥಾನದ ಹೆಸರಿನಲ್ಲಿ ಪ್ರಾಚೀನ ಮಂದಿರಗಳನ್ನು ಅನಧಿಕೃತವೆಂದು ಸರ್ವೋಚ್ಚ ನ್ಯಾಯಾಲಯದ ಅದೇಶವನ್ನು ತಪ್ಪಾಗಿ ಅರ್ಥಮಾಡಿಕೊಂಡು ಸರ್ಕಾರವು ಧ್ವಂಸ ಮಾಡುತ್ತಿದೆ ಮತ್ತು ಸರ್ಕಾರ ಸರ್ಕಾರದ ಅನಧಿಕೃತ ದೇವಸ್ಥಾನಗಳ ಪಟ್ಟಿಯಲ್ಲಿ ನೂರಾರು ವರ್ಷಗಳ ಇತಿಹಾಸ ಸಾವಿರಾರು ಹಿಂದೂ ಧಾರ್ಮಿಕ ಸ್ಥಳಗಳನ್ನು ಅನಧಿಕೃತವೆಂದು ದೋಷಪೂರಿತವಾಗಿ ಪಟ್ಟಿ ಮಾಡಲಾಗಿದೆ. ನಂಜನಗೂಡಿನಲ್ಲಿ ಅಧಿಕಾರಿಗಳು ಚೋಳರ ಕಾಲದ 800 ವರ್ಷದ ಶ್ರೀ ಆದಿಶಕ್ತಿ ದೇವಸ್ಥಾನವನ್ನು ರಾತ್ರೋರಾತ್ರಿ ಧ್ವಂಸ ಮಾಡಿದರು. ಸರ್ಕಾರದ ಅನಧಿಕೃತ ದೇವಸ್ಥಾನಗಳ ಪಟ್ಟಿಯಲ್ಲಿ 6395 ಸಾವಿರಕ್ಕೂ ಅಧಿಕ ಧಾರ್ಮಿಕ ಸ್ಥಳಗಳಿವೆ. ಈ ಪಟ್ಟಿಯಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಪ್ರಾಚೀನ ದೇವಸ್ಥಾನಗಳನ್ನು ಸೇರಿಸಲಾಗಿದೆ. ಉದಾಹರಣೆಗೆ ಮಂಗಳೂರಿನ ಶಕ್ತಿ ನಗರದಲ್ಲಿರುವ 800 ವರ್ಷದ ಇತಿಹಾಸ ಇರುವ ವೈದ್ಯನಾಥ ದೈವಸ್ಥಾನವನ್ನು ಸಹ ಅನಧಿಕೃತ ಪಟ್ಟಿಯಲ್ಲಿ ಸೇರಿಸಲಾಗಿದೆ. ರಾಜ್ಯವ್ಯಾಪಿ ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳು ತರಾತುರಿಯಲ್ಲಿ ಸ್ಥಳ ಪರಿಶೀಲನೆ ನಡೆಸದೇ ದೋಷಪೂರಿತ ಧಾರ್ಮಿಕ ಸ್ಥಳಗಳ ಪಟ್ಟಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 57 ಹಿಂದೂ ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸುವ ಪಟ್ಟಿಯಲ್ಲಿ ಸೇರಿಸಲಾಗಿದೆ. ಅದರಲ್ಲಿ 57 ಧಾರ್ಮಿಕ ಸ್ಥಳಗಳು ಸಹ ಹಿಂದೂ ಸಮುದಾಯಕ್ಕೆ ಸೇರಿವೆ. ಆದರೆ ಅನ್ಯಮತೀಯರ ಯಾವುದೇ ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಪಟ್ಟಿಯಲ್ಲಿ ಸೇರಿಸಿಲ್ಲ. ಅದೇ ರೀತಿಯಲ್ಲಿ ಮೈಸೂರು ಜಿಲ್ಲೆಯಲ್ಲಿ 315 ಅನಧಿಕೃತ ಧಾರ್ಮಿಕ ಕಟ್ಟಡ ಅನಧಿಕೃತವೆಂದು ಎಂದು ಗುರುತಿಸಿದ್ದು, ಅದರಲ್ಲಿ ತೆರವು ಮಾಡುವ ಪಟ್ಟಿಯಲ್ಲಿ 93 ಹಿಂದೂ ಧಾರ್ಮಿಕ ಸ್ಥಳಗಳನ್ನು ಮಾತ್ರ ಪಟ್ಟಿಯಲ್ಲಿ ಸೇರಿಸಲಾಗಿದೆ. ಒಟ್ಟಾರೆ ರಾಜ್ಯವ್ಯಾಪಿ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಮಾಡಿದ ಅನಧಿಕೃತ ಧಾರ್ಮಿಕ ಸ್ಥಳಗಳ ಪಟ್ಟಿಯು ದೋಷಪೂರಿತವಾಗಿದ್ದು, ಏಕಮುಖ ಹಿಂದೂ ವಿರೋಧಿಯಾಗಿದೆ. ಈ ವಿಷಯದ ಕುರಿತಾಗಿ ಬಂಟ್ವಾಳ ತಹಶೀಲ್ದಾರಾದ ರಶ್ಮಿ ಎಸ್ ಆರ್ ಇವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾe ಎಸ್. ಬೊಮ್ಮಾಯಿ ಇವರಿಗೆ ಮುಂದಿನ ಬೇಡಿಕೆಗಳೊಂದಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಯಕುಮಾರ ಸಜಿಪ, ಸೋಮನಾಥ, ಅಜಿತ್, ಸಂಕೇತ, ಕಿರಣ ಇವರು ಉಪಸ್ಥಿತರಿದ್ದರು.

ಬೇಡಿಕೆಗಳು :
೧. ದೋಷಪೂರಿತವಾಗಿ ತಯಾರಿ ಮಾಡಿದ ಈ ಅನಧಿಕೃತ ಪಟ್ಟಿಯನ್ನು ಕೂಡಲೇ ಪರಿಷ್ಕರಿಸಬೇಕು ಮತ್ತು ದೋಷಪೂರಿತ ಪಟ್ಟಿಯ ಆಧಾರದ ಮೇಲೆ ಧ್ವಂಸ ಮಾಡಿದ ದೇವಾಲಯಗಳ ಮರುಸ್ಥಾಪನೆಯಾಗಬೇಕು.
೨. ಹೊಸದಾಗಿ ಪರಿಷ್ಕರಿಸಿದ ಅನಧಿಕೃತ ಧಾರ್ಮಿಕ ಸ್ಥಳಗಳ ಪಟ್ಟಿಗಳನ್ನು ಸರ್ಕಾರದ ಎಲ್ಲಾ ಸಂಕೇತಸ್ಥಳದಲ್ಲಿ ಅಪ್‌ಲೋಡ್ ಮಾಡಬೇಕು ಮತ್ತು ಈ ಪಟ್ಟಿಯನ್ನು ಎಲ್ಲಾ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಬೇಕು ಮತ್ತು ಪರಿಷ್ಕರಿಸಿದ ಅನಧಿಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ ಏನಾದರೂ ಸಂಬಂಧಿಸಿದ ಕಾಗದ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲು ಸಾರ್ವಜನಿಕರಿಗೆ ಸಾಕಷ್ಟು ಸಮಯಾವಕಾಶ ನೀಡಬೇಕು.
೩. ಸರ್ಕಾರದ ವತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪುನರ್ ಪರಿಶೀಲನೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ, ಕಾನೂನು ಹೋರಾಟ ನಡೆಸಬೇಕು.
೪. ಇದು ಅತ್ಯಂತ ಸೂಕ್ಷ್ಮ ವಿಷಯವಾಗಿರುವುದರಿಂದ ಇದನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಣೆಯನ್ನು ಮಾಡಬೇಕು.
೫. ಹಾಲಿ ಅಥವಾ ಮುಂದಿನ ಅಧಿವೇಶನದಲ್ಲಿ ಹಿಂದೂ ದೇವಾಲಯದ ಸಂರಕ್ಷಣೆ, ಪುನರನಿರ್ಮಾಣ, ಸ್ಥಳಾಂತರದ ಬಗ್ಗೆ ಮಸೂದೆಯನ್ನು ಮಂಡಿಸಿ ಕಾಯಿದೆಯನ್ನು ರೂಪಿಸಬೇಕು.
೬. ಪ್ರಾಚೀನ ಮಂದಿರಗಳನ್ನು ಸಂರಕ್ಷಣೆಯ ದೃಷ್ಟಿಯಿಂದ, ಅವುಗಳನ್ನು ಪುರಾತತ್ವ ಇಲಾಖೆಗೆ ಸೇರಿಸಬೇಕು ಮತ್ತು ಇದರ ಆಸ್ತಿಗಳಿಗೆ ಸಂಬಂಧಿಸಿದ ವರದಿಗಳನ್ನು ಪ್ರಕಟಿಸಬೇಕು.

