ಬಂಟ್ವಾಳ: ತಾಲೂಕಿನಲ್ಲಿ ಅ. 12ರಂದು ದಿನವಿಡೀ ಸುರಿದ ಮಳೆಯಿಂದ ಸಾಕಷ್ಟು ಕಡೆಗಳಲ್ಲಿ ಹಾನಿ ಸಂಭವಿಸಿದೆ. ಕೊಳ್ನಾಡು ಗ್ರಾಮದ ಕಾಡುಮಠದಲ್ಲಿ ಮೇಲಿನ ಮನೆಯವರ ಆವರಣ ಗೋಡೆ ಕುಸಿದು ಚಿತ್ರಾವತಿ ಅವರ ಮನೆಗೆ ಹಾನಿಯಾಗಿದೆ. ಕರಿಯಂಗಳ ಗ್ರಾಮದ ರಂಜಿತ್ ಶೆಟ್ಟಿ ಅವರ ನಿರ್ಮಾಣ ಹಂತದ ಮನೆ ಕುಸಿದಿದೆ.


ಅರಳ ಗುಡ್ಡೆಯಂಗಡಿಯಲ್ಲಿರುವ ಶಾಲೆಯ ತಡೆಗೋಡೆ ಕುಸಿದು ಶಾಲೆಯ ಮೂರು ಬಸ್ಸುಗಳಿಗೆ ಹಾನಿಯಾಗಿದೆ. ಸರಪಾಡಿ ಗ್ರಾಮದ ಉಜಿರಾಡಿಯಲ್ಲಿ ಐತಪ್ಪ ಪೂಜಾರಿ ಅವರ ಮನೆಯ ಬದಿಯ ತಡೆಗೋಡೆ ಕುಸಿದಿದೆ. ಅನಂತಾಡಿ ಗ್ರಾಮದ ಬಾಕಿಲದಲ್ಲಿ ವಾಣಿ ಅವರ ತಡೆಗೋಡೆ ಕುಸಿದಿದೆ. ಅರಳ ಗ್ರಾಮದ ಅಲ್ಮುಡೆಯಲ್ಲಿ ಚಂದ್ರಾವತಿ ಉಮೇಶ್ ಅವರ ಮನೆಯ ಆವರಣ ಗೋಡೆ ಕುಸಿದಿದೆ.
ಅಮ್ಟಾಡಿ ಗ್ರಾಮದ ಮುಂಡೆಗುರಿಯಲ್ಲಿ ಜಾನಕಿ ಅವರ ಮನೆಯ ಮುಂಭಾಗಕ್ಕೆ ಆವರಣ ಗೋಡೆ ಕುಸಿದಿದೆ. ಅರಳ ಗ್ರಾಮದ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಹಿಂಭಾಗದಲ್ಲಿ ಆವರಣ ಗೋಡೆ ಕುಸಿದಿದೆ. ಕೊಯಿಲ ಗ್ರಾಮದ ಮೋಹನ್ ಪೂಜಾರಿ ಅವರ ಮನೆಯ ಹಿಂಬದಿಯಲ್ಲಿ ಹಾನಿಯಾಗಿದೆ.
ಬಾಳ್ತಿಲ ಗ್ರಾಮದ ಸುಧೆಕಾರುನಲ್ಲಿ ಸೇಸಪ್ಪ ನಾಯ್ಕ್ ಮನೆಯ ಹಿಂಬದಿ ಗುಡ್ಡ ಕುಸಿದು ಹಾನಿಯಾಗಿದೆ. ಅರಳ ಗ್ರಾಮ ನಿವಾಸಿ ಸುಂದರ ಅವರ ಮನೆಯ ಮೇಲೆ ಆವರಣ ಗೋಡೆ ಕುಸಿದಿದೆ. ಸಜೀಪನಡು ಗ್ರಾಮದ ದೇರಾಜೆ ಬರೆ ಮನೆ ಲೀಲಾ ಪೂಜಾರಿ ಅವರ ಮನೆಯ ಸಮೀಪ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ಸಜೀಪಮೂಡ ಗುರುಮಂದಿರದ ಬಳಿ ಶಬೀರ್ ಅವರ ತಡೆಗೋಡೆ ಕುಸಿದು ರವಿ ಅವರ ಮನೆಯ ತಗಡು ಶೀಟ್‌ಗಳಿಗೆ ಹಾನಿಯಾಗಿದೆ.

