ಉಜಿರೆ: ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಾಡುವುದು ಮತ್ತು ಮಸ್ತಕಾಭಿಷೇಕ ನೋಡುವುದು ಪುಣ್ಯದ ಕೆಲಸವಾಗಿದೆ. ಮಸ್ತಕಾಭಿಷೇಕ ಮಾಡಿದಾಗ ಮಂಗಲ ದ್ರವ್ಯಗಳು ಮಸ್ತಕದಿಂದ ದೂರ ಸರಿಯುವಂತೆ ನಮ್ಮ ಆತ್ಮನಿಗಂಟಿದ ಕರ್ಮದ ಕೊಳೆಯೂ ತೊಳೆದು ಹೋಗುತ್ತದೆ ಎಂದು ಪೂಜ್ಯ ಆದಿತ್ಯ ಸಾಗರ್ ಮುನಿಮಹಾರಾಜ್ ಹೇಳಿದರು.
ಭಾನುವಾರ ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ತಮಿಳುನಾಡು ಜೈನ ಸಮಾಜದ ವತಿಯಿಂದ ಅರಿಹಂತಗಿರಿಯ ಧವಳಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ನಡೆದ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಅವರು ಮಂಗಲ ಪ್ರವಚನ ನೀಡಿದರು.
ದೇಶದಲ್ಲಿ ಅನೇಕ ಬಾಹುಬಲಿ ಮೂರ್ತಿಗಳಿದ್ದರೂ ಪ್ರತಿಯೊಂದೂ ವಿಭಿನ್ನವಾಗಿದೆ, ವಿಶಿಷ್ಟವಾಗಿದೆ. ನಮ್ಮ ದೃಷ್ಟಿಯಂತೆ ಸೃಷ್ಟಿ ಇರುತ್ತದೆ. ದೇವರಲ್ಲಿ ಭಕ್ತಿ ಇದ್ದವನಿಗೆ ಬಾಹುಬಲಿ ದೇವರಾಗಿ ಕಾಣುತ್ತಾನೆ. ಭಕ್ತಿ ಇಲ್ಲದವನಿಗೆ ಬರಿ ಪಾಷಾಣ ಮೂರ್ತಿ ಅಷ್ಟೆ.
ಭಗವಾನ್ ಬಾಹುಬಲಿ ಸಾಧು-ಸಂತರಿಗೆ ಸಹನೆ, ತಾಳ್ಮೆಯ ಸಂದೇಶ ನೀಡಿದರೆ ಶ್ರಾವಕರಿಗೆ -ಶ್ರಾವಕಿಯರಿಗೆ ಸೇವೆ ಮಾಡಬೇಕೆಂಬ ಸಂದೇಶ ನೀಡುತ್ತಾರೆ. ಮೂರ್ತಿ ನಿರ್ಮಾಣದಿಂದ ಹಾಗೂ ಮಸ್ತಕಾಭಿಷೇಕದಿಂದ ಹಣ, ಸಮಯ ವ್ಯರ್ಥವಾಗುತ್ತದೆ ಎಂದು ಮಿಥ್ಯಾ ದೃಷ್ಟಿಗಳು ಟೀಕೆ ಮಾಡುವುದು ಸೂಕ್ತವಲ್ಲ. ಮಸ್ತಕಾಭಿಷೇಕ ಮಾಡುವುದರಿಂದ ಹಾಗೂ ನೋಡುವುದರಿಂದ ನಮ್ಮ ಮನಸ್ಸಿನ ಮೇಲೆ ಗಾಢ ಪರಿಣಾಮ ಉಂಟಾಗುತ್ತದೆ.. ಮನಸ್ಸು ಪವಿತ್ರವಾಗುತ್ತದೆ. ಶುಭ ಪರಿಣಾಮ ಉಂಟಾಗುತ್ತದೆ. ನಮ್ಮ ವರ್ತನೆಯಲ್ಲಿ ಪರಿವರ್ತನೆಯಾಗುತ್ತದೆ.


ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆಯಿಂದ ಮತ್ತು ಮಹಾಮಸ್ತಕಾಭಿಷೇಕ ನಡೆಸಿ ಡಿ. ವೀರೇಂದ್ರ ಹೆಗ್ಗಡೆಯವರು ವಿಶ್ವಶಾಂತಿ, ಲೋಕಕಲ್ಯಾಣ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ ರಾಜರ್ಷಿಯಾಗಿದ್ದಾರೆ ಎಂದು ಹೇಳಿ ಅಭಿನಂದಿಸಿದರು.
ತಮಿಳುನಾಡು ಅರಿಹಂತಗಿರಿಯ ಧವಳಕೀರ್ತಿ ಸ್ವಾಮೀಜಿ ಮಾತನಾಡಿ ಹೆಗ್ಗಡೆಯವರ ಬಹುಮುಖಿ ಸಮಾಜ ಸೇವೆಯನ್ನು ಶ್ಲಾಘಿಸಿದರು. ತಮಿಳುನಾಡಿನಲ್ಲಿರುವ ಸುಮಾರು 500 ಬಸದಿಗಳ ಜೀರ್ಣೋದ್ಧಾರಕ್ಕೆ ಹೆಗ್ಗಡೆಯವರು ನೆರವು ನೀಡಿದ್ದು ಶೇ. 95 ರಷ್ಟು ಕೆಲಸ ಪೂರ್ಣಗೊಂಡಿದೆ ಎಂದರು.
ಅರಿಹಂತಗಿರಿ ಮಠದ ವತಿಯಿಂದ ಸ್ವಾಮೀಜಿಯವರು ಹೆಗ್ಗಡೆಯವರನ್ನು ಗೌರವಿಸಿದರು.
ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೆಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರ ಸೇವೆಯನ್ನು ಸ್ವಾಮೀಜಿ ಶ್ಲಾಘಿಸಿ. ಅಭಿನಂದಿಸಿದರು.
ಉಜ್ಜಂತ ಸಾಗರ್ ಮುನಿಮಹಾರಾಜರು ತಾಮ್ರ ಪತ್ರದಲ್ಲಿ ಬರೆದ ಒಂದು ಸಾವಿರ ವರ್ಷಗಳಷ್ಟು ಪುರಾತನವಾದ ತತ್ಪಾರ್ಥ ಸೂತ್ರದ ಗ್ರಂಥವನ್ನು ಹೆಗ್ಗಡೆಯವರಿಗೆ ಸಮರ್ಪಣೆ ಮಾಡಿದರು.
ಸಹಜಸಾಗರ್ ಮುನಿಮಹಾರಾಜರು, ಸೋಂದಾ ಮಠದ ಭಟ್ಟಾಕಲಂಕ ಸ್ವಾಮೀಜಿ, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ನೀರು, ಹಾಲು, ಎಳನೀರು, ಕಬ್ಬಿನ ರಸ, ಅರಿಶಿನ, ಕೇಸರಿ, ಶ್ರೀಗಂಧ, ಚಂದನ ಅಷ್ಟಗಂಧ ಮೊದಲಾದ ಮಂಗಲ ದ್ರವ್ಯಗಳಿಂದ ೧೦೦೮ ಕಲಶಗಳಿಂದ ಬಾಹುಬಲಿಗೆ ಮಸ್ತಕಾಭಿಷೇಕ ಮಾಡಿ ಭಕ್ತರು ಧನ್ಯತೆಯನ್ನು ಹೊಂದಿದರು. ಪುಣ್ಯ ಸಂಚಯ ಮಾಡಿ ಕೊಂಡರು.
ಎ. ಮಿತ್ರಸೇನ ಜೈನ್ ಉಪ್ಪಿನಂಗಡಿ ಕಾರ್ಯಕ್ರಮ ನಿರ್ವಹಿಸಿದರು.