ಬಂಟ್ವಾಳ: ಗ್ರಾಮಾಂತರ ಪ್ರದೇಶಗಳ ಕೇಂದ್ರ ,ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಸಂಗಮ ಸ್ಥಾನ ಮಾಣಿ ಊರಿನಲ್ಲಿ ಈಗಾಗಲೇ ಬ್ಯಾಂಕ್ ಆಫ್ ಬರೋಡ ರಾಷ್ಟ್ರೀಕೃತ ಬ್ಯಾಂಕ್ ಇದ್ದು, ಮತ್ತೊಂದು ಎ.ಟಿ.ಎಂ. ಸಹಿತ ರಾಷ್ಟ್ರೀಕೃತ ಬ್ಯಾಂಕ್ ಬೇಕು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.


ಈಗಾಗಲೇ ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಬ್ಯಾಂಕಿಂಗ್ ವ್ಯವಹಾರಕ್ಕೆ ಸರದಿ ಸಾಲಲ್ಲಿ ನಿಂತು ಕಷ್ಟ ಅನುಭವಿಸಿದ ಹಿನ್ನೆಲೆ ಮತ್ತೊಂದು ರಾಷ್ಟ್ರೀಕೃತ ಬ್ಯಾಂಕು ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಮಾಣಿಯಲ್ಲಿ ಇರುವ ಬ್ಯಾಂಕ್ ಆಫ್ ಬರೋಡದ ಬ್ಯಾಂಕ್ ಶಾಖೆಯಲ್ಲಿ ಜನದಟ್ಟಣೆ ಯಾವಾಗಲೂ ಇರುವುದರಿಂದ ತುರ್ತು ಬ್ಯಾಂಕಿಂಗ್ ವ್ಯವಹಾರದ ಅವಶ್ಯಕತೆ ಇರುವ ಜನರು ಮಾತ್ರವಲ್ಲದೆ ಮಾಣಿ ಗ್ರಾಮದ ಹೆಚ್ಚಿನ ಗ್ರಾಮಸ್ಥರು ಕಲ್ಲಡ್ಕ, ಕಬಕ, ಪುತ್ತೂರು, ಬಿ.ಸಿ. ರೋಡ್ ನ ಬೇರೆ ಬೇರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬ್ಯಾಂಕಿಂಗ್ ವ್ಯವಹಾರಕ್ಕೆ ಅವಲಂಬಿಸಿದ್ದಾರೆ. ಮಾಣಿಯಲ್ಲಿ ಬ್ಯಾಂಕ್ ಆಫ್ ಬರೋಡ ದ ಏ.ಟಿ.ಎಂ. ಕಾರಣಾಂತರಗಳಿಂದ ಸ್ತಗಿತಗೊಂಡಿದೆ. ಜನರಿಗೆ ತುರ್ತು ಹಣ ಪಡೆಯಲು, ಕಡಿಮೆ ವಿದ್ಯಾಬ್ಯಾಸ ಹೊಂದಿದ ಗ್ರಾಮೀಣ ಪ್ರದೇಶದ ಜನರಿಗೆ ಏ.ಟಿ.ಎಂ.ಮತ್ತು ನೆಟ್ ಬ್ಯಾಂಕಿಂಗ್, ಗೂಗಲ್ ಪೇ, ಫೋನ್ ಪೇ ನಂತಹ ಕ್ಯಾಶ್ ಲೆಸ್ ವ್ಯವಸ್ಥೆ ಬಳಸಲು ಗೊತ್ತಿಲ್ಲ. ಆದ್ದರಿಂದ ಮಾಣಿಯಲ್ಲಿ ಮತ್ತೊಂದು ರಾಷ್ಟ್ರೀಕೃತ ಬ್ಯಾಂಕ್ ಆಗಲೇಬೇಕು ಎಂಬ ಜನರ ಬಹು ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದ್ದರಿಂದ ಶೀಘ್ರವಾಗಿ ಮಾಣಿ ಊರಿಗೆ ಮತ್ತೊಂದು ರಾಷ್ಟ್ರೀಕೃತ ಬ್ಯಾಂಕ್ ಆರಂಭವಾಗಲಿ ಸಂಬಂಧಪಟ್ಟ ಜನಪ್ರತಿನಿದಿಗಳು ,ಅದಿಕಾರಿಗಳು ಈ ಬಗ್ಗೆ ಗಮನಹರಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.












