ಬಂಟ್ವಾಳ: ಕಲ್ಲಡ್ಕ ನಿವಾಸಿ ಮಹಿಳೆಯೊಬ್ಬರು ತಮ್ಮ ಪರ್ಸನ್ನು ಮೆಲ್ಕಾರ್-ಬೋಳಂಗಡಿ ಮಧ್ಯೆ ಕಳೆದುಕೊಂಡಿದ್ದು, ಅದು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ಮಹಿಳೆ ಸಿಬಂದಿಯೊಬ್ಬರಿಗೆ ಸಿಕ್ಕಿದ್ದು, ಗುರುವಾರ ಅದನ್ನು ಠಾಣೆಯಲ್ಲಿ ವಾರಿಸುದಾರ ಮಹಿಳೆಗೆ ಹಸ್ತಾಂತರಿಸಲಾಯಿತು.
ಸಂಚಾರಿ ಪೊಲೀಸ್ ಠಾಣೆಯ ಸಿಬಂದಿ ವಿದ್ಯಾ ಅವರು ಜು. 15ರ ಸಂಜೆ ಸಂಚಾರಿ ಠಾಣೆಗೆ ತೆರಳುತ್ತಿದ್ದಾಗ ಅವರಿಗೆ ಮೆಲ್ಕಾರ್ ಸಮೀಪ ಪರ್ಸ್ವೊಂದು ಸಿಗುತ್ತದೆ. ಅದನ್ನು ಠಾಣೆಗೆ ತಂದು ನೋಡಿದಾಗ ಸುಮಾರು 15 ಸಾವಿರದಷ್ಟು ಹಣ ಇರುವುದು ಗಮನಕ್ಕೆ ಬರುತ್ತದೆ. ತಕ್ಷಣ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದ್ದು, ಮಾಧ್ಯಮಗಳಲ್ಲಿ ಆ ಸುದ್ದಿ ಪ್ರಕಟಗೊಳ್ಳುತ್ತದೆ.
ಕಲ್ಲಡ್ಕ ನಿವಾಸಿ, ಟೈಲರ್ ವೃತ್ತಿ ನಿರ್ವಹಿಸುತ್ತಿದ್ದ ಗೀತಾ ಕೊಟ್ಟಾರಿ ಅವರಿಗೆ ಸೇರಿದ ಪರ್ಸ್ ಅದಾಗಿದ್ದು, ಅವರ ಸಂಬಂಧಿಕ ಸುಜೀತ್ ಕೊಟ್ಟಾರಿ ಅವರ ಮೂಲಕ ಪರ್ಸ್ ಠಾಣೆಯಲ್ಲಿ ಇರುವುದು ಗೊತ್ತಾಗುತ್ತದೆ. ಗುರುವಾರ ಗೀತಾ ಅವರು ಪೊಲೀಸ್ ಸಿಬಂದಿ ಗೀತಾ ಅವರಿಂದ ಪರ್ಸ್ ಸ್ವೀಕರಿಸಿ ಧನ್ಯವಾದ ತಿಳಿಸಿದರು.

ಪರ್ಸ್ ಕಳೆದುಕೊಂಡಿದ್ದು ಹೇಗೆ.?
ಪಾಣೆಮಂಗಳೂರಿನಲ್ಲಿ ಟೈಲರ್ ಅಂಗಡಿ ಹೊಂದಿದ್ದ ಗೀತಾ ಅವರು, ಜು. 15ರಂದು ಸಂಜೆ ತಮ್ಮ ಅಂಗಡಿಯನ್ನು ಮುಚ್ಚಿ ಆಟೋದಲ್ಲಿ ಸಾಮಾನುಗಳನ್ನು ತುಂಬಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಮೆಲ್ಕಾರ್-ಬೋಳಂಗಡಿ ಮಧ್ಯೆ ಪರ್ಸ್ ಕಳೆದುಕೊಳ್ಳುತ್ತಾರೆ. ಆ ವೇಳೆ ಜೋರಾಗಿ ಮಳೆ ಬರುತ್ತಿದ್ದು, ಪರ್ಸ್ ಬಿದ್ದದ್ದು ಗೊತ್ತೇ ಆಗಲಿಲ್ಲ.
ಆದರೆ ಆಟೋ ನರಹರಿ ಪರ್ವತದ ಬಳಿ ತಲುಪುತ್ತಿದ್ದಂತೆ ಪರ್ಸ್ ಬಿದ್ದಿರುವುದು ಗಮನಕ್ಕೆ ಬಂದು, ಮತ್ತೆ ಪಾಣೆಮಂಗಳೂರುವರೆಗೆ ತೆರಳಿ ಹುಡುಕಾಟ ನಡೆಸುತ್ತಾರೆ. ಆದರೆ ಪರ್ಸ್ ಸಿಗುವುದಿಲ್ಲ. ಈ ವಿಚಾರವನ್ನು ಸುಜೀತ್ ಕೊಟ್ಟಾರಿ ಅವರಿಗೆ ತಿಳಿಸಿದ್ದು, ಅವರು ಪರ್ಸ್ ಠಾಣೆಯಲ್ಲಿರುವ ಮಾಹಿತಿಯನ್ನು ಗೀತಾ ಅವರಿಗೆ ತಿಳಿಸಿದ್ದಾರೆ.
