ಬಂಟ್ವಾಳ: ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಮತ್ತು ಅಭಿರುಚಿ ಜೋಡುಮಾರ್ಗ ವತಿಯಿಂದ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿಶುಕ್ರವಾರ ರಾತ್ರಿ ಆಯೋಜಿಸಲಾದ ಹೆಗ್ಗೋಡಿನ ಸತ್ಯಶೋಧನ ರಂಗಸಮುದಾಯ ಅರ್ಪಿಸಿದ ಜನುಮದಾಟ ಅಭಿನಯದ ಪೌರಾಣಿಕ, ಸಂಗೀತಮಯನಾಟಕ ಕುರುಕ್ಷೇತ್ರ ಪ್ರೇಕ್ಷಕರನ್ನು ದಶಕಗಳ ಹಿಂದಕ್ಕೆ ಕರೆದೊಯ್ಯಿತು.


ಹಿರಿಯ ರಂಗಕರ್ಮಿ ಅಭಿರುಚಿ ಜೋಡುಮಾರ್ಗದ ಮಹಾಬಲೇಶ್ವರ ಹೆಬ್ಬಾರ್, ಸುಂದರ ರಾವ್, ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆರಾಮಚಂದ್ರ ಭಟ್, ಕಸಾಪ ತಾಲೂಕು ಅಧ್ಯಕ್ಷ ಕೆ. ಮೋಹನ ರಾವ್ ಮತ್ತು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶಮಾಂಬಾಡಿ ನಾಟಕಕ್ಕೆ ಚಾಲನೆ ನೀಡಿದರು.
ಬಳಿಕ ಸುಮಾರು ಎರಡೂವರೆ ತಾಸು ಡಾ.ಎಂ.ಗಣೇಶ್ ಹೆಗ್ಗೋಡು ಪರಿಕಲ್ಪನೆ ಮತ್ತು ನಿರ್ದೇಶನದ ಈ ನಾಟಕವನ್ನು ನುರಿತ ಕಲಾವಿದರನ್ನುಒಳಗೊಂಡ ಯುವಕರ ತಂಡ ದಶಕಗಳ ಹಿಂದಿನ ಕಂಪನಿ ನಾಟಕಗಳಲ್ಲಿರುವ ಪರಿಕರಗಳನ್ನು ಬಳಸಿ ಅಭಿನಯಿಸಿ ಗಮನ ಸೆಳೆದರು. ಕುರುಕ್ಷೇತ್ರಯುದ್ಧದ ಪೂರ್ವಭಾವಿ ಸನ್ನಿವೇಶಗಳು ಹಾಗೂ ದ್ರೋಣ, ಅಭಿಮನ್ಯುವಿನ ಅವಸಾನ, ಗದಾಯುದ್ಧದ ಸನ್ನಿವೇಶಗಳನ್ನು ಕಲಾವಿದರು ಕಟ್ಟಿಕೊಟ್ಟರು.ದಾಯಾದಿ ಕಲಹ, ಅಸೂಯೆ, ಮತ್ಸರ, ಸೇಡು ಮೊದಲಾದ ಮನಸ್ಸಿನ ಪಲ್ಲಟಗಳು, ನೋವು, ಕುತಂತ್ರ, ಕುಂತಿ, ಗಾಂಧಾರಿಯ ಪುತ್ರ ವ್ಯಾಮೋಹದಂಥಸನ್ನಿವೇಶಗಳು ಇಂದಿಗೂ ಪ್ರಸ್ತುತ ಎಂಬ ಭಾವನೆ ಮೂಡಿಸುವಂತೆ ಮಾಡಲು ಯಶಸ್ವಿಯಾದವು. ನಾಟಕ ಪ್ರದರ್ಶನದ ಬಳಿಕ ಕಲಾವಿದ ಮಂಜುಸಿರಿಗೇರಿ ನಾಟಕದ ಕುರಿತು ಮಾಹಿತಿ ನೀಡಿದರು. ನ್ಯಾಯವಾದಿ ಅಜಿತ್ ಕುಮಾರ್ ಅಡ್ಡೂರು ಅನಿಸಿಕೆ ವ್ಯಕ್ತಪಡಿಸಿದರು.