ವಿಟ್ಲ: ಆರೋಗ್ಯ ಎಲ್ಲಾ ಸಂಪತ್ತುಗಳಿಂದ ಶ್ರೇಷ್ಟವಾಗಿರುವಂತಹದ್ದಾಗಿದೆ. ನಿಷ್ಕಪಟ ಪ್ರೀತಿಯಿಂದ ಮಾತ್ರ ದೇವರನ್ನು ಒಲಿಸಿಕೊಳ್ಳಬಹುದು. ಹಿಂದುಗಳಲ್ಲಿ ಗಟ್ಟಿತನದ ಸಂಘಟನೆ ಇದ್ದಾಗ ಯಾವ ರೀತಿಯ ಮತಾಂತರಗಳಾಗಲು ಸಾಧ್ಯವಿಲ್ಲ ಎಂದು ಬಾರ್ಕೂರು ಭಾರ್ಗವ ಬೀಡು ಬಾರ್ಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಡಾ.ವಿಶ್ವಸಂತೋಷ ಭಾರತಿ ಶ್ರೀಪಾದರು ಹೇಳಿದರು.
ಅವರು ಗುರುವಾರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಾಡ ಶಿಬರಿಕಲ್ಲ ಶ್ರೀ ಮಲರಾಯ – ಮೂವರ್ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ದೇವರು ಮತ್ತು ಆರೋಗ್ಯ-ಆಯುರ್ವೇದ ವಿಚಾರದ ಕುರಿತು ಧಾರ್‍ಮಿಕ ಉಪನ್ಯಾಸ ನೀಡಿದರು. ಹಿಂದು ಎನಿಸಿದವರು ಜಾತಿ ನೋಡದೇ ಒಗ್ಗಟಿನಿಂದಿರುವ ಕಾರ್‍ಯವಾಗಬೇಕು. ಹಿಂದೂ ಧರ್ಮದಲ್ಲಿ ಧರ್ಮ ಬಿಟ್ಟು ಹೋಗಿಲ್ಲ ಎಂಬುದಕ್ಕೆ ಕುಂಡಡ್ಕದಲ್ಲಿ ಆಗಿರುವ ಕೆಲಸಗಳು ಸಾಕ್ಷಿಯಾಗಿದೆ ಎಂದರು.
ವರ್ಕಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಮುಗ್ಧತೆ ನಿಸ್ವಾರ್ಥ ಸೇವೆ ಇದ್ದಲ್ಲಿ ಭಗವಂತನ ಅನುಗ್ರಹವಿರುತ್ತದೆ. ನಮ್ಮೊಳಗಿನ ಪರಮಾತ್ಮನ ಜಾಗೃತಿಯಾಗಲು ದೇವಾಲಯಗಳು ಅಗತ್ಯ. ದೇವಾಲಯದಲ್ಲಿ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆದಾಗ ಶಕ್ತಿ ವೃದ್ಧಿಯಾಗುತ್ತದೆ. ಸನಾತನ ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟವರನ್ನು ಒಂದಾಗಿಸುವ ಕಾರ್ಯ ಕೇಂದ್ರಗಳಿಂದ ನಡೆಯಬೇಕು. ಜನರಲ್ಲಿ ಶ್ರದ್ಧಾ ಕೇಂದ್ರಗಳ ಬಗೆಗಿನ ಜಾಗೃತಿಯಾಗಬೇಕಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದ ದಯಾನಂದಗೌಡ, ಕೊರಗಪ್ಪಶೆಟ್ಟಿ ಜೇಡರಕೋಡಿ, ಬೊಳಿಗದ್ದೆ ಕೂಸಪ್ಪ ಶೆಟ್ಟಿ, ಕ್ರೀಡಾಕ್ಷೇತ್ರದ ಪ್ರತಿಭೆ ದೀಕ್ಷಿತ್ ಶೆಟ್ಟಿ ಅಬೀರಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಬಂಗಾಡಿ ಅರಮನೆಯ ರವಿರಾಜ ಬಲ್ಲಾಳರು ವಹಿಸಿದ್ದರು.
ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ಕೆ. ಅನಂತ ಪದ್ಮನಾಭ ಅಸ್ರಣ್ಣರು, ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಲಕುಮಿ ತಂಡದ ಕಿಶೋರ್ ಡಿ.ಶೆಟ್ಟಿ, ಸುಬ್ರಾಯ ಪೈ ವಿಟ್ಲ, ಯುವವಾಹಿನಿ ಕೇಂದ್ರ ಘಟಕದ ಅಧ್ಯಕ್ಷ ಜಯಂತ ನಡುಬೈಲು, ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ಎಂ.ಜಯರಾಮ ಶೆಡ್ಟಿಗಾರ್, ಉದ್ಯಮಿ ಕೃಷ್ಣಪ್ಪ ಪೂಜಾರಿ, ಮೆಸ್ಕಾಂ ಎ.ಇ. ಚಂದ್ರಶೇಖರ ಕುಳಾಲು, ವಿನಾಯಕ ನಗರ ಗೌರೀಗಣೇಶ ಸೇವಾ ಸಂಘದ ಪ್ರಧಾನ ಕಾರ್‍ಯದರ್ಶಿ ಸತೀಶ್ ಪೂಜಾರಿ ನೇರೋಳ್ತಡ್ಕ, ಕೆ. ಟಿ. ವೆಂಕಟೇಶ್ವರ ಕರ್ಗಲ್ಲು ನೂಜಿ, ಯೋಗೀಶ ಕುಡ್ವ ಕುಂಡಡ್ಕ ಉಪಸ್ಥಿತರಿದ್ದರು.

ವೇದಿಕೆ ಸಮಿತಿ ಪ್ರಮುಖರಾದ ಶ್ರೀಮಂದರ ಜೈನ್ ಸ್ವಾಗತಿಸಿದರು. ಜಿನ್ನಪ್ಪ ಗೌಡ ಪೆಲತ್ತಿಂಜ ಪ್ರಸ್ತಾಪನೆಗೈದರು. ಚಿದಾನಂದಪೆಲತ್ತಿಂಜ, ಶ್ರೀಪತಿ ನಾಯಕ್., ಅಶ್ವಿನಿ ಕುಂಡಡ್ಕ ಗೌರವಾರ್ಪಣೆ ನಡೆಸಿದರು. ಪದ್ಮನಾಭ ಚಪಡಿಯಡ್ಕ ವಂದಿಸಿದರು. ಕೃಷ್ಣಕಿಶೋರ್ ಕಾರ್‍ಯಕ್ರಮ ನಿರೂಪಿಸಿದರು.