ಬಂಟ್ವಾಳ : ಹತ್ತು ವರ್ಷಗಳ ಹಿಂದೆ ಕೇವಲ ಬೆರಳೆಣಿಕೆಯ ಮಂದಿ ಸೇರಿ ಕುಲಾಲ ಕುಂಬಾರರ ಯುವ ವೇದಿಕೆಯನ್ನು ಸ್ಥಾಪಿಸಲಾಗಿತ್ತು. ಆದರೆ ಇಂದು ಪ್ರತೀ ತಾಲೂಕು ಘಟಕಗಳಲ್ಲೂ ಹೆಚ್ಚಿನ ಸದಸ್ಯರು ಸೇರ್ಪಡೆಗೊಂಡು ಕುಲಾಲ ಯುವವೇದಿಕೆ ಬಲಗೊಂಡಿದೆ. ಕುಲಾಲ ಸಮುದಾಯದ ಕ್ರೀಡಾಕೂಟವೊಂದರಲ್ಲಿ ೩೫ಕ್ಕಿಂತಲೂ ಅಧಿಕ ತಂಡಗಳು ಪಾಲ್ಗೊಳ್ಳುವುದೆಂದರೆ ಸಮುದಾಯದ ಸಂಘಟನೆ ಗಟ್ಟಿಯಾಗುತ್ತಿದೆ ಎನ್ನುವುದನ್ನು ಸಾಬೀತುಪಡಿಸಿದೆ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ತಿಳಿಸಿದರು.
ಅವರು ಬಂಟ್ವಾಳದ ಎಸ್.ವಿ.ಎಸ್ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ನಡೆದ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ವತಿಯಿಂದ ಸರ್ವಜ್ಞ ಜಯಂತಿ ಪ್ರಯುಕ್ತ ಬಂಟ್ವಾಳ ತಾಲೂಕು ಮಟ್ಟದ ಸ್ವಜಾತಿ ಬಾಂಧವರ ವಾಹನ ಜಾಥ ಹಾಗೂ ಸರ್ವಜ್ಞ ಟ್ರೋಫಿ ಕ್ರಿಕೆಟ್ ಪಂದ್ಯಾಟದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಕುಲಾಲ ಸಂಘಟನೆಗಳ ಒಕ್ಕೂಟ ಸ್ಥಾಪಿಸುವ ಬಗ್ಗೆ ಕುಲಾಲ ನಾಯಕರು ಚಿಂತನೆ ನಡೆಸುತ್ತಿದ್ದಾರೆ, ಮಡಕೆ ಮಾಡುವ ಕುಂಬಾರರಿಗೆ ನೈತಿಕ ಸ್ಥೈರ್ಯ ತುಂಬುವ ಕಾರ್ಯ ಆಗಬೇಕಿದೆ. ರೈಲು ನಿಲ್ದಾಣಗಳಲ್ಲಿ ಮಣ್ಣಿನ ಲೋಟೆಯಲ್ಲಿ ಚಹಾ ನೀಡುವ ವ್ಯವಸ್ಥೆ ಆರಂಭಗೊಂಡಿದ್ದು ಇದರ ಗುತ್ತಿಗೆಯನ್ನು ಬೇರೆ ಯಾರಿಗೋ ನೀಡುವ ಬದಲು ಕುಂಬಾರರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನ ಉದ್ಯಮಿ ಗೋಪಾಲ ಗೋವಿಂದೋಟ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕುಲಾಲ ಕುಂಬಾರರ ಯುವ ವೇದಿಕೆಯಿಂದ ಸಮಾಜ ಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು. ಬಂಟ್ವಾಳ ಕುಲಾಲ ಕುಂಬಾರರ ಯುವವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ರೈಲಿನಲ್ಲಿ ಸಾಹಸ ಮೆರೆದ ಯುವಕ ರಾಜೇಶ್ ನರಿಕೊಂಬು ಅವರನ್ನು ಸನ್ಮಾನಿಸಲಾಯಿತು. ಅನಾರೋಗ್ಯಕ್ಕೊಳಗಾದ ಬಾಲಕ ನಿತೇಶ್ ಅವರಿಗೆ ಕಲ್ಪವೃಕ್ಷ ಠೇವಣಿಯನ್ನು ಹಸ್ತಾಂತರಿಸಲಾಯಿತು. ಕುಲಾಲರ ಜನಗಣತಿ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು.
ಸಭಾಕಾರ್ಯಕ್ರಮಕ್ಕೆ ಮೊದಲು ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಅವರು ಸದಸ್ಯರ ಗುರುತಿನ ಚೀಟಿ ಬಿಡಗಡೆಗೊಳಿಸಿದರು. ಬಳಿಕ ಮಂಗಳೂರಿನ ಯಜ್ಞೇಶ್ ಕುಲಾಲ್ ಬರ್ಕೆ ತ್ರಿಪದಿ ಕವಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ವಾಹನ ಜಾಥಕ್ಕೆ ಚಾಲನೆ ನೀಡಿದರು. ನಂತರ ಬಿ.ಸಿ.ರೋಡಿನ ರಾಜಾ ರಸ್ತೆಯ ಮೂಲಕ ವಾಹನ ಜಾಥ ಬಂಟ್ವಾಳದ ಎಸ್‌ವಿಎಸ್ ಮೈದಾನಕ್ಕೆ ಸಾಗಿ ಬಂತು.
ಮುಖ್ಯ ಅತಿಥಿಗಳಾಗಿ ಕರಾವಳಿ ಕುಲಾಲ ಕುಂಬಾರರ ಯುವವೇದಿಕೆಯ ಜಿಲ್ಲಾಧ್ಯಕ್ಷ ಜಯೇಶ್ ಗೋವಿಂದ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಡಿ.ಎಂ.ಕುಲಾಲ್, ಸೈಬರ್ ಕ್ರೈಂ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಕೃಷ್ಣ ಕುಲಾಲ್, ರಘುನಾಥ ಸಾಲ್ಯಾನ್, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಬಿಂಬಧ್ವನಿ ಪತ್ರಿಕೆಯ ಪ್ರಧಾನ ಸಂಪಾದಕ ವಸಂತ್ ಕಾರ್ಕಳ, ಉದ್ಯಮಿ ರಾಮಕುಲಾಲ್ ಉಪ್ಪಿನಂಗಡಿ, ಮಳಲಿ ಕುಂಬಾರರ ಗುಡಿಕೈಗಾರಿಕೆ ಸಂಘದ ಅಧ್ಯಕ್ಷ ಸುಂದರ ಬಿ. ಬಂಗೇರ, ಇಂಜಿನಿಯರ್ ವಜ್ರೇಶ್ ಕುಲಾಲ್ ಹಾಜರಿದ್ದರು.
ನಿಕಟಪೂರ್ವ ಅಧ್ಯಕ್ಷ ನಾರಾಯಣ ಪೆರ್ನೆ ಸ್ವಾಗತಿಸಿದರು, ಕಾರ್ಯದರ್ಶಿ ಹರಿಪ್ರಸಾದ್ ವಂದಿಸಿದರು, ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.
೧೦ವೈಎ ಕುಲಾಲ
Attachments area