ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಮಾತನಾಡಿ ಎಲ್ಲರನ್ನು ಅರಿತು ಬಾಳುವ ಮನಸ್ಸು ನಮ್ಮದಾಗಬೇಕು. ಶ್ರದ್ಧಾ ಭಕ್ತಿಯ ಸೇವೆ ನಮ್ಮದಾಗಬೇಕು. ಎಲ್ಲಿ ಜನಬಲ, ಪ್ರೀತಿ ಇದೆಯೋ ಅಲ್ಲಿ ಗೆಲುವು ನಿಶ್ಚಿತ. ಹಲವಾರು ಗಣ್ಯರ ಸಹಕಾರದಿಂದ ದೇವಸ್ಥಾನ ಈ ಮಟ್ಟಕ್ಕೆ ತಲುಪಲು ಸಾಧ್ಯವಾಗಿದೆ. ಉಪಕಾರ ಸ್ಮರಣೆ ನಮ್ಮಲ್ಲಿರಲಿ. ನಾವೆಲ್ಲರೂ ಒಂದಾಗಿ ಮುಂದುವರಿಯೋಣ ಎಂದು ತಿಳಿಸಿದರು.
ಕ್ಷೇತ್ರದ ಮೊಕ್ತೇಸರರಾದ ಎಂ.ಕೆ. ಕುಕ್ಕಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಣಿಲ ಗ್ರಾ.ಪಂ.ಅಧ್ಯಕ್ಷರಾದ ಶ್ರೀಧರ ಬಾಳೆಕಲ್ಲು,
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಮಾಣಿಲ ಗ್ರಾಮ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಬಿರ್ಕಾಪು, ಪ್ರಗತಿಪರ ಕೃಷಿಕರಾದ ಸುಧಾಕರ ಪೂಜಾರಿ ಕೇಪು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯರಾದ ಡಾ.ಗೀತಪ್ರಕಾಶ್, ಪ್ರಮುಖರಾದ ಪುರುಷೋತ್ತಮ ಕಾರಾಜೆ, ಪ್ರಗತಿಪರ ಕೃಷಿಕರಾದ ಡೊಂಬಯ್ಯ ನಾಯ್ಕ ಕೇಪು ರವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.
ದೇವಿಪ್ರಸಾದ್ ಕುಕ್ಕಾಜೆ, ಸತ್ಯಪ್ರಸಾದ್ ಕುಕ್ಕಾಜೆ, ಶ್ರೀಜ ಕುಕ್ಕಾಜೆ ಸನ್ಮಾನ ಪತ್ರ ವಾಚಿಸಿದರು.
ಎ.ಎಸ್.ನಾರಾಯಣ ಕನ್ನಡಗುಳಿರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯಾದವ ಪಿಲವೂರು ಪ್ರಾರ್ಥಿಸಿದರು. ದೇವಿಪ್ರಸಾದ್ ಕುಕ್ಕಾಜೆ ಸ್ವಾಗತಿಸಿದರು. ಸುಕನ್ಯಾ ವಂದಿಸಿದರು. ರವಿ ಎಸ್.ಎಂ. ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕ್ಷೇತ್ರದಲ್ಲಿ ಶ್ರೀ ಶ್ರೀಕೃಷ್ಣ ಗುರೂಜಿರವರ ನೇತೃತ್ವದಲ್ಲಿ ವಾರ್ಷಿಕ ಜಾತ್ರಾಮಹೋತ್ಸವದ ಪ್ರಥಮ ದಿನ ಬೆಳಿಗ್ಗೆ ಸ್ಥಳಶುದ್ಧಿ, ಗಣಪತಿ ಹೋಮ ಶ್ರೀ ದೇವಿಯ ಕಲಶ ಪ್ರತಿಷ್ಠೆ, ಉದಯ ಪೂಜೆ ನಡೆಯಿತು. ಸೂರ್ಯೋದಯದಿಂದ ಸೂರ್ಯಸ್ತದ ವರೆಗೆ ವಿವಿಧ ತಂಡಗಳಿಂದ ಭಜನೆ ನಡೆಯಿತು.
ಮಧ್ಯಾಹ್ನ ಶ್ರೀ ದೇವಿಯ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು.
ಸಾಯಂಕಾಲ ಆರು ಗಂಟೆಯಿಂದ ಆಯ್ದ ಶಾಲಾ ತಂಡಗಳಿಂದ ಡ್ಯಾನ್ಸ್ ಸ್ಪರ್ಧೆ, ರಾತ್ರಿ ಶ್ರೀ ದೇವಿಯ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.
ಜಾತ್ರೋತ್ಸವದ ಎರಡನೇ ದಿನವಾದ ಬೆಳಿಗ್ಗೆ ಗಂಟೆ ೬ಕ್ಕೆ ಸ್ಥಳ ಶುದ್ಧಿ, ಗಣಪತಿ ಹೋಮ ಬಳಿಕ ಉದಯ ಪೂಜೆ, ಶ್ರೀ ನರಸಿಂಹ ಮಂಡಲ ಪೂಜೆ, ಕಲಶ ಸ್ನಾನ, ತುಲಾಭಾರ ಸೇವೆ ನಡೆಯಿತು. ಬಳಿಕ ಮಂತ್ರನಾಟ್ಯಕಲಾ ಗುರುಕುಲ(ರಿ.) ಉಳ್ಳಾಲ ಪ್ರಸ್ತುತ ಪಡಿಸುವ “ನಾಟ್ಯ ಮಂತ್ರಂ” ನಡೆಯಿತು. ಮಧ್ಯಾಹ್ನ ಶ್ರೀ ದೇವಿಯ ಮಹಾಪೂಜೆ, ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಿತು. ಬಳಿಕ ದೀಪರಾಧನೆ, ಶ್ರೀ ಅಂಜನೇಯ ಸ್ವಾಮಿಗೆ ಮಹಾಪೂಜೆ, ಆಂಜನೇಯ ಸೇವೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ೭ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾರದ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಅಭಿನಯಿಸುವ ‘ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’ ತುಳು ಪೌರಾಣಿಕ ಮತ್ತು ಸಾಮಾಜಿಕ ಭಕ್ತಿ ಪ್ರಧಾನ ನಾಟಕ ನಡೆಯಿತು. ರಾತ್ರಿ ಗಂಟೆ ೮:೩೦ಕ್ಕೆ ಮಹಾಗಣಪತಿ, ಪರಿವಾರ ದೇವರ ಮಹಾಪೂಜೆ ಬಳಿಕ ಶ್ರೀ ನಾಗ ದೇವರ ಮಹಾಪೂಜೆ, ನಾಗದರ್ಶನ ನಾಗತಂಬಿಲ, ಪ್ರಸಾದ ವಿತರಣೆ ನಡೆಯಿತು.