ವಿಟ್ಲ: ಮಾಣಿಲದಂತಹ ಹಳ್ಳಿಯ ಮಣ್ಣಿನ ಪರಿಸರದಲ್ಲಿ ಹುಟ್ಟಿ ಬೆಳೆದ ಮಕ್ಕಳು ಶಿಕ್ಷಣದೊಂದಿಗೆ ಸ್ವಪ್ರಯತ್ನ, ಛಲದ ಮೂಲಕ ಬೆಳೆದು ಈ ಊರಿಗೆ ಕೀರ್ತಿ ತರುವಂತಾಗಬೇಕು. ನಾವು ನೆಡುವ ಗಿಡಗಳು ಮುಂದಕ್ಕೆ ಸಮಾಜಕ್ಕೆ ಬೆಳೆದು ಗಾಳಿ, ನೆರಳು, ಫಲ ನೀಡುವಂತಾಗಬೇಕು ಎಂದು ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಹೇಳಿದರು.
ಅವರು ಶ್ರೀ ಕ್ಷೇತ್ರದ ವತಿಯಿಂದ ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ಪರಿಸರದ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್‍ಯಕ್ರಮದಲ್ಲಿ ಪುಸ್ತಕ ವಿತರಿಸಿ ಆಶೀರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಕೆ.ಕುಕ್ಕಾಜೆ ವಹಿಸಿದ್ದರು. ಸಮಾರಂಭದಲ್ಲಿ ಕಾಳಿಕಾ ಕಲಾ ಸಂಘದ ಅಧ್ಯಕ್ಷ ಸಂಕಪ್ಪ ಸುವರ್ಣ ಬಾಡೂರು, ಮಹಿಳಾ ಸಂಘದ ಅಧ್ಯಕ್ಷೆ ನಳಿನಾಕ್ಷಿ ಕಾಮಾಜಾಲು, ಗಿರೀಶ್ ಕುಕ್ಕಾಜೆ, ಮನೋಜ್ ತಾರಿದಳ ಉಪಸ್ಥಿತರಿದ್ದರು.
ರವಿ ಎಸ್.ಎಂ. ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ದೇವಿಪ್ರಸಾದ್ ಕುಕ್ಕಾಜೆ ವಂದಿಸಿದರು.
