ವಿಟ್ಲ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಕಾನೂನು ಅಧಿಕಾರಿಯಾಗಿರುವ ವಿಟ್ಲ ಅರಮನೆಯ ವಿ. ನರಸಿಂಹ
ವರ್ಮ ಅವರು ಬರೆದ 'ಆಕಾಶದ ಚಿತ್ರಗಳು' ಕವನ ಸಂಕಲನ ಬಿಡುಗಡೆ ಸಮಾರಂಭವು ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಬಹುಭಾಷಾ ಸಾಹಿತಿ ಮಹಮ್ಮದ್ ಬಡ್ಡೂರು ಅವರು ಮಾತನಾಡಿ, ಜಾತಿ, ಮತ, ಪಂಥ, ವರ್ಗ, ಎಲ್ಲವನ್ನೂ
ಮೀರಿದ ಮಾನವೀಯ ತತ್ವವೇ ಸಾಹಿತ್ಯ. ಅಂತಹ ಸಾಹಿತ್ಯ ಮಾನವನ ಬದುಕಿಗೆ ಸಂಸ್ಕಾರ ನೀಡುತ್ತದೆ ಎಂದು ನುಡಿದರು.
ವಿಟ್ಲ ಅರಮನೆಯ ವಿ.ಆರ್. ನರಸಿಂಹ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು
ರಥಬೀದಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಪ್ರಕಾಶ್ಚಂದ್ರ ಶಿಶಿಲ, ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನ ನಿವೃತ್ತ
ಪ್ರಾಂಶುಪಾಲ ಹಾಗೂ ಕನ್ನಡ ಸಂಘ ವಿಟ್ಲ ಇದರ ಅಧ್ಯಕ್ಷ ಎಂ. ಅನಂತಕೃಷ್ಣ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಹಿತಿ
ಶಿವಕುಮಾರ ಸಾಯ ಕೃತಿ ಪರಿಚಯ ಮಾಡಿದರು. ಸಂಘಟಕ ಮತ್ತು ಪ್ರಕಾಶಕ ವಿ. ರಾಜಾರಾಮ ವರ್ಮ ಸ್ವಾಗತಿಸಿ, ಪ್ರಾಸ್ತಾವಿಕವಾಗಿ
ಮಾತನಾಡಿದರು. ಗಾಯಕಿ ವೀಣಾ ನರಸಿಂಹ ವರ್ಮ ಆಶಯ ಗೀತೆ ಹಾಡಿದರು.
ವಿ. ಸೀತಾಲಕ್ಷ್ಮೀ ವರ್ಮ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ರಾಜಶೇಖರ ವಿಟ್ಲ ವಂದಿಸಿದರು. ಶುಭಾ ಪ್ರಸಾದ್ ಮತ್ತು ವೈಶಾಲಿ
ರಾಜಾರಾಮ ತಂಡದಿಂದ ಗೀತ ಗಾಯನ ನಡೆಯಿತು. ಚಿರಂತನ ಪ್ರಕಾಶನ ವಿಟ್ಲ ಇದರ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
