ವಿಟ್ಲ: ಕೊಳ್ನಾಡು ಗ್ರಾಮ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಜಂಟಿ ಆಶ್ರಯದಲ್ಲಿ ಸ್ವ-ಸಹಾಯ ಗುಂಪುಗಳಿಗೆ ಎನ್.ಆರ್.ಎಲ್.ಎಂ ಸಂಜೀವಿನಿ ಹಾಗೂ ನರೇಗಾ ಮಾಹಿತಿ ನಡೆಯಿತು.
ಸಭೆಯ ಆಧ್ಯಕ್ಷತೆ ವಹಿಸಿದ ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಸ್ವ-ಉದ್ಯೋಗ ನಡೆಸುವ ಗುಂಪು ಸದಸ್ಯರಿಗೆ ಒಕ್ಕೂಟದ ಮೂಲಕ ಒದಗಿಸುವ ಬಡ್ಡಿ ರಹಿತ ಸಾಲ ರೂಪದ ಹಣಕಾಸು ವ್ಯವಸ್ಥೆಯನ್ನು ಪಡೆದು ಸ್ವಾವಲಂಬಿಗಳಾಗಿ ಹಾಗೂ ಈಗಾಗಲೇ ಕೊಳ್ನಾಡು ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಗುಂಪು ಸದಸ್ಯರು ಭಾಗವಹಿಸುತ್ತಿರುವುದು ಅಭಿನಂದನೀಯ. ಗ್ರಾಮ ಪಂಚಾಯಿತಿ ಆಡಳಿತ ಈ ಬಗ್ಗೆ ತರಬೇತಿ ಕಾರ್‍ಯಾಗಾರ ನಡೆಸುವುದರ ಜೊತೆಗೆ ಒಕ್ಕೂಟಗಳ ಕಚೇರಿಗೆ ಕೊಠಡಿ ಒದಗಿಸಲು ಬದ್ಧವಾಗಿದೆ ಎಂದರು.
ತಾಲೂಕು ಕಾರ್‍ಯನಿರ್ವಾಹಕ ಆಧಿಕಾರಿ ರಾಜಣ್ಣ ಮಾತನಾಡಿ ಅಣಬೆ ಕೃಷಿಯಂತಹ ಸುಲಭ ಸ್ವ-ಉದ್ಯೋಗವನ್ನು ಗ್ರಾಮೀಣ ಪ್ರದೇಶದ ಜನರು ಮಾಡಿದಲ್ಲಿ ಉತ್ತಮ ಮಾರುಕಟ್ಟೆ ಲಭ್ಯವಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾರುಕಟ್ಟೆ ನಿರ್‍ಮಿಸಲು ಅನುದಾನ ಕೂಡ ಒದಗಿಸಲಿದ್ದೇವೆ ಎಂದರು.
ಸಹಾಯಕ ನಿರ್ದೇಶಕರಾದ ಪ್ರಶಾಂತ್‌ರವರು ಸಂಜೀವಿನಿ ಹಾಗೂ ಉದ್ಯೋಗ ಖಾತರಿ ಯೋಜನೆಗಳ ಮಾಹಿತಿ ನೀಡಿದರು. ಪಂಚಾಯಿತಿ ಸದಸ್ಯರಾದ ಪವಿತ್ರ ಪೂಂಜ, ಜಯಂತಿ ಎಸ್ ಪೂಜಾರಿ, ಐರಿನ್ ಡಿಸೋಜ ಹಾಗೂ ಒಕ್ಕೂಟದ ಅಧ್ಯಕ್ಷರಾದ ಚಂದ್ರಕಲಾ ಭಾಗವಹಿಸಿದ್ದರು.
ಪಿಡಿಒ ಹರೀಶ್ ಕೆ.ಎ ಸ್ವಾಗತಿಸಿ, ವಂದಿಸಿದರು. ತಾಲೂಕು ಸಂಯೋಜಕರಾದ ಕುಶಾಲಪ್ಪರವರು ಕಾರ್‍ಯಕ್ರಮ ನಿರೂಪಿಸಿದರು.


