Wednesday, February 12, 2025

ಕೊಯಿಲ: ಸರ್ಕಾರಿ ಸೌಲಭ್ಯ ಕೊರತೆ ನಡುವೆ 40 ವರ್ಷ ಸೇವೆ ಪೂರೈಸಿದ ‘ಅಂಚೆಯಣ್ಣ’

 ಬಂಟ್ವಾಳ: ತಾಲ್ಲೂಕಿನ ಗ್ರಾಮೀಣ ಪ್ರದೇಶ ಕೊಯಿಲ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಅಂಚೆ ಪೇದೆಯಾಗಿ ದುಡಿದು ಸರಳ ಮತ್ತು ಶಿಸ್ತುಬದ್ಧ ಜೀವನ ನಡೆಸುವ ಮೂಲಕ ಜನರ ಮೆಚ್ಚುಗೆ ಗಳಿಸಿದ ಇಲ್ಲಿನ ಅಂಚೆ ಪೇದೆ ಕೆ.ಕೊರಗಪ್ಪ ಪೂಜಾರಿ ಇವರಿಗೆ ಇದೇ 2ರಂದು ಬೀಳ್ಕೊಡುಗೆ ಮತ್ತು ಯಕ್ಷಗಾನ ತಾಳಮದ್ದಳೆ ಕೂಟ ಆಯೋಜಿಸುವ ಮೂಲಕ ನಾಗರಿಕ ಸನ್ಮಾನ ನೀಡಲು ಗ್ರಾಮಸ್ಥರು ಸಜ್ಜಾಗಿದ್ದಾರೆ.
ಇಲ್ಲಿನ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ಸಭಾಂಗಣದಲ್ಲಿ ಇದೇ 2ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೊಕ್ತೇಸರ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ನಿವೃತ್ತ ಶಿಕ್ಷಕಿ ಜೆ.ಕೆ.ಪಾವನಾದೇವಿ, ಪುತ್ತೂರು ವಿಭಾಗ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ವಿಠಲ ಎಸ್.ಪೂಜಾರಿ, ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಮುಖ್ಯಶಿಕ್ಷಕ ಸುಧೀರ್ ಜಿ. ಮತ್ತಿತರ ಹಲವು ಮಂದಿ ಗಣ್ಯರು ಭಾಗವಹಿಸುವರು.
ಅಂದು ಮಧ್ಯಾಹ್ನ ಭೋಜನದ ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಶರಸೇತು ಬಂಧ’ ಯಕ್ಷಗಾನ ತಾಳಮದ್ದಳೆ ಕೂಟ ಆಯೋಜಿಸಿದ್ದಾರೆ.

40 ವರ್ಷಗಳ ಹಾದಿ:
ಕಳೆದ 1978ರಲ್ಲಿ ಇಲ್ಲಿನ ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನದ ಎದುರಿನ ಕೊಠಡಿಯೊಂದರಲ್ಲಿದ್ದ ಅಂಚೆ ಕಚೇರಿಯಲ್ಲಿ ಸ್ಥಳೀಯ ನಿವಾಸಿ ಕೆ.ಕೊರಗಪ್ಪ ಪೂಜಾರಿ ಇವರು ಅಂಚೆ ಪೇದೆಯಾಗಿ ಸೇರ್ಪಡೆಗೊಂಡಿದ್ದು, ಅಂದು ಸ್ಥಳೀಯ ಹೊಸಗದ್ದೆ ನಿವಾಸಿ ದಿವಂಗತ ಸದಾಶಿವ ಭಂಡಾರಿ ಪೋಸ್ಟ್ ಮಾಸ್ಟರ್ ಆಗಿದ್ದರು. ಆ ಬಳಿಕ ಪೋಸ್ಟ್ ಮಾಸ್ಟರ್ ರಾಘವ ರಾವ್ ಅವರೊಂದಿಗೆ ನಿಷ್ಠೆಯಿಂದಲೇ ದುಡಿದಿದ್ದ ಇವರು ಕಳೆದ 1985ರ ಬಳಿಕ ಪೋಸ್ಟ್ ಮಾಸ್ಟರ್ ದಯಾವತಿ ವಿ.ಶೆಟ್ಟಿ ಅವರ ಜೊತೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದೆ ನಡೆದುಕೊಂಡೇ ಪತ್ರಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದ ಇವರಿಗೆ ಬಳಿಕ ಅಂದಿನ ಬಂಟ್ವಾಳ ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಎಂ.ದೇವಪ್ಪ ಶೆಟ್ಟಿ ಮಾವಂತೂರು ಇವರು ಉಚಿತ ಸೈಕಲ್ ದೊರಕಿಸಿ ಕೊಟ್ಟಿದ್ದರು. ಇದೀಗ ದ್ವಿಚಕ್ರ ವಾಹನ ಮೂಲಕ ಅಂಚೆ ಪತ್ರ ವಿಲೇವಾರಿ ಮಾಡುತ್ತಿದ್ದಾರೆ. ಇಲ್ಲಿನ ಗದ್ದೆ ಮತ್ತು ಗುಡ್ಡ ಪ್ರದೇಶಗಳಿಮದ ಕೂಡಿದ ಅಮ್ಯಾಲು, ಕೆಂಪುಗುಡ್ಡೆ, ಮಾದುಕೋಡಿ, ಲಕ್ಷ್ಮೀಕೋಡಿ, ಕೊಪ್ಪಳ, ನೀರಲ್ಕೆ ಹೀಗೆ ಕೊಯಿಲ ಗ್ರಾಮ ಮಾತ್ರವಲ್ಲದೆ ರಾಯಿ ಮತ್ತು ಅರಳ ಗ್ರಾಮಗಳ ಗಡಿ ಪ್ರದೇಶಗಳಿಗೂ ಅಂಚೆಪತ್ರ ತಲುಪಿಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇದೀಗ ಇವರು ಗ್ರಾಮಸ್ಥರಿಂದ ‘ಪೋಸ್ಟ್ ಮ್ಯಾನ್ ಕೊರಗಪ್ಪಣ್ಣ’ ಎಂದೇ ಗುರುತಿಸಿಕೊಂಡಿದ್ದಾರೆ.
ಕಳೆದ 40 ವರ್ಷಗಳ ಹಿಂದೆ ಯಾವುದೇ ಮನೆಗಳಲ್ಲಿ ದೂರವಾಣಿ ಸಂಪರ್ಕ ಇರಲಿಲ್ಲ. ಪ್ರತೀ ಮನೆಗೆ ಅಂಚೆ ಪತ್ರಗಳ ಮೂಲಕವೇ ಸಂದೇಶ ರವಾನೆಯಾಗುತ್ತಿತ್ತು. ಮಾತ್ರವಲ್ಲದೆ ದೂರದ ಬೆಂಗಳೂರು, ಮುಂಬೈ, ದುಬೈ ಮತ್ತಿತರ ಕಡೆಗಳಲ್ಲಿ ನೆಲೆಸಿರುವ ಉದ್ಯೋಗಿಗಳು ‘ಮನಿ ಆರ್ಡರ್’ ಮೂಲಕ ಕಳುಹಿಸುತ್ತಿದ್ದ ನಗದು ಮೊತ್ತವನ್ನು ಪ್ರಾಮಾಣಿಕವಾಗಿ ಅವರ ತಂದೆ-ತಾಯಿಗೆ ತಲುಪಿಸುವ ಮಹತ್ತರ ಜವಾಬ್ದಾರಿಯೂ ಇತ್ತು. ಕೆಲವೆಡೆ ಬೀಡಿ ಕಾರ್ಮಿಕರು ಸೇರಿದಂತೆ ಅನಕ್ಷರಸ್ಥರಿಗೆ ಬಂದ ಪತ್ರಗಳನ್ನು ಸ್ವತಃ ಓದಿ ಹೇಳುವ ಅನಿವಾರ್ಯತೆಯೂ ನನ್ನ ಮೇಲಿತ್ತು. ಇದೀಗ ಎಲ್ಲರೂ ಸುಶಿಕ್ಷಿತರಾಗಿದ್ದು, ಪ್ರತಿಯೊಬ್ಬರಲ್ಲಿಯೂ ಅಂಚೆ ಮತ್ತು ಬ್ಯಾಂಕ್ ಖಾತೆ ಹೊಂದಿದ್ದಾರೆ.
ಕಳೆದ 40 ವರ್ಷಗಳಲ್ಲಿ ಗ್ರಾಮದ ಜನರ ಪ್ರೀತಿ ಮಾತ್ರ ಗಳಿಸಿದ್ದೇನೆಯೇ ವಿನಃ ಸರ್ಕಾರದಿಂದ ನನಗೆ ಸಿಗಬೇಕಿದ್ದ 7ನೇ ವೇತನ ಆಯೋಗ ಮತ್ತಿತರ ಸೌಲಭ್ಯಗಳಿಂದ ವಂಚಿತನಾಗಿದ್ದೇನೆ. ಈ ನಾಲ್ಕು ದಶಕಗಳ ಅವಧಿಯಲ್ಲಿ ಸೇವಾ ಹಿರಿತನಕ್ಕೆ ಸಿಗಬೇಕಿದ್ದ ಮೂರು ಭಡ್ತಿ ಮತ್ತು ವೇತನ ಹೆಚ್ಚಳ, ಪಿಂಚಣಿ ಸೌಲಭ್ಯವೂ ಸಿಕ್ಕಿಲ್ಲ ಎಂಬ ಕೊರಗು ಇದೆ.- ಕೆ.ಕೊರಗಪ್ಪ ಪೂಜಾರಿ ಅಂಚೆಯಣ್ಣ.
ತೀರಾ ಸರಳ ಮತ್ತು ಶಿಸ್ತುಬದ್ಧ ಜೀವನದ ಜೊತೆಗೆ ಸೌಮ್ಯ ಸ್ವಭಾವದಿಂದಲೇ ಅಂಚೆ ಪೇದೆ ಹುದ್ದೆಗೆ ಕೊರಗಪ್ಪ ಪೂಜಾರಿ ಅವರು ನ್ಯಾಯ ಒದಗಿಸಿದ್ದಾರೆ.- ಪಿ.ನೋಣಯ ಶೆಟ್ಟಿಗಾರ್ ಸ್ಥಳೀಯ ನಿವಾಸಿ.

More from the blog

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...