ವಿಟ್ಲ: ಬಂಟ್ವಾಳ ತಾಲೂಕಿನ ಕೋಡಪದವು ಸಮೀಪದ ಕುಕ್ಕಿಲ ಎಂಬಲ್ಲಿ ಹಿಂದೂ ಯುವಕನೋರ್ವ ತನ್ನ ಮದುವೆಯ ಔತಣಕೂಟದ ಅಂಗವಾಗಿ ಮಸೀದಿಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ.
ಕೋಡಪದವಿನ ಕುಕ್ಕಿಲ ನಿವಾಸಿ, ನವವಿವಾಹಿತ ಧನಂಜಯ್ ಎಂಬವರು ಇಫ್ತಾರ್ ಕೂಟವನ್ನು ಆಯೋಜಿದ್ದರು. ಈ ಸಂದರ್ಭದಲ್ಲಿ ಕೋಡಪದವು ಹಾಗೂ ಕುಕ್ಕಿಲ ಜಮಾಅತ್‌ನ ಸುಮಾರು 150 ಮಂದಿ ಕುಕ್ಕಿಲ ಮಸೀದಿಯಲ್ಲಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿ, ಉಪವಾಸ ತೊರೆದು ಸಾಕ್ಷಿಯಾದರು.
ಕೋಡಪದವಿನ ಕುಕ್ಕಿಲದ ನಿವಾಸಿ ಜತ್ತನ್ನ (ಜತ್ತು ಮೇಸ್ತ್ರಿ) ಅವರ ಪುತ್ರ ಧನಂಜಯ್‌ರಿಗೆ ಪೆರ್ಲದ ನಿವಾಸಿ ಮಾಲತಿ ಎಂಬವರ ಜೊತೆ ಮೇ ೮ರಂದು ವಿಟ್ಲ ಶ್ರೀರಾಮ ಮಂದಿರಲ್ಲಿ ಮದುವೆ ನಡೆದಿತ್ತು. ತನ್ನ ಮದುವೆಗೆ ಊರಿನ ಎಲ್ಲರನ್ನೂ ಆಹ್ವಾನಿಸಲಾಗಿತ್ತು. ಈ ಸಂದರ್ಭ ಊರಿನ ಮುಸ್ಲಿಮರು ಮದುವೆಗೆ ಬಂದು ಶುಭ ಹಾರೈಸಿ ತೆರಳಿದ್ದು, ರಂಜಾನ್ ಉಪವಾಸದ ಕಾರಣ ಮದುವೆಯ ಔತಣಕೂಟದಲ್ಲಿ ಅವರು ಭಾಗವಹಿಸಿರಲಿಲ್ಲ. ಈ ಕಾರಣದಿಂದ ಕುಕ್ಕಿಲದ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದರು.
ಧನಂಜಯ್ ಅವರು ಕಳೆದ ೨ವರ್ಷಗಳಿಂದ ಕಲ್ಲಡ್ಕದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ.
“ಸೌಹಾರ್ದತೆಗೆ ಬೇಕು ಮೂಲ ಮನಸು, ಜನರು ಮೆಚ್ಚುತ್ತಾರೆ ಜಾತಿ-ಬೇಧವಿಲ್ಲದ ಮನಸು” ಎಂಬ ಶೀರ್ಷಿಕೆಯೊಂದಿಗೆ ಧನಂಜಯ್ ಅವರ ವೈವಾಹಿಕ ಜೀವನಕ್ಕೆ ಶುಭ ಹಾರೈಕೆ ಹಾಗೂ ಜನರ ಪ್ರಶಂಸೆಗೆ ಪಾತ್ರವಾದ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
