ಬಂಟ್ವಾಳ: ಸರಕಾರ ಹಾಗೂ ಇತರ ಅನೇಕ ಸಂಘಟನೆಗಳು ಸಂಘಟಿತರಾಗಿ ದುಡಿದ ಪರಿಣಾಮ ದೇಶದಲ್ಲಿ ಕೋವಿಡ್ ಮಹಾಮಾರಿಯನ್ನು ಎದುರಿಸಲು ಸಾಧ್ಯವಾಯಿತು. ದೇಶದ ಪ್ರತಿ ಪ್ರಜೆಯ ಮೇಲಿನ ಕಾಳಜಿಯಿಂದ ಉಚಿತ ಲಸಿಕೆ ನೀಡುವ ಕಾರ್ಯ ನಡೆದಿದೆ. ಪಡಿ ಸಂಸ್ಥೆ ಯಿಂದ ಇನ್ನಷ್ಟು ಜನಪರ ಕಾರ್ಯಗಳು ಮೂಡಿಬಂದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬೂಡ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಹೇಳಿದರು.

ಅವರು ಮಂಗಳವಾರ ಬಿ.ಸಿ.ರೋಡಿನಲ್ಲಿರುವ ಶಾಸಕರ ಕಚೇರಿಯಲ್ಲಿ ಬಂಟ್ವಾಳ ಪುರಸಭಾ ವಾಪ್ತಿಯಲ್ಲಿ ಕೋವಿಡ್ ಬಾಧಿತರಿಗೆ ಪಡಿ ಸಂಸ್ಥೆಯ ವತಿಯಿಂದ ಕಿಟ್ ವಿತರಿಸಿ ಮಾತನಾಡಿದರು. ಕಿಟ್ ವಿತರಣೆ ಕಾರ್ಯ ಉತ್ತಮ ರೀತಿಯಲ್ಲಿ ನಡೆಯಲು ಸಹಕಾರ ನೀಡುವಂತೆ ಶಾಸಕ ರಾಜೇಶ್ ನಾಯ್ಕ್ ಅವರು ನಿರ್ದೇಶನ ನೀಡಿದ್ದಾರೆ ಎಂದರು.
ಹಿರಿಯ ರಂಗಕರ್ಮಿ ಮಂಜು ವಿಟ್ಲ ಮಾತನಾಡಿ, ಅಂದಿನ ಭೀಕರ ಖಾಯಿಲೆ ಏಡ್ಸ್ ವಿರುದ್ಧ ಜಾಗೃತಿ ಕಾರ್ಯವನ್ನು ನಡೆಸಿದ ಪಡಿ ಸಂಸ್ಥೆಯು ಎಲ್ಲಾ ರೋಗಿಗಳಲ್ಲೂ ಧೈರ್ಯ ತುಂಬುವ ಕಾರ್ಯ ಮಾಡಿತ್ತು. ಶಾಲೆಗಳಲ್ಲಿ ಎಸ್‌ಡಿಎಂಸಿ ಅಸ್ತಿತ್ವಕ್ಕೆ ಬಂದಾಗ ತಳ ಮಟ್ಟದಿಂದಲೇ ಜನರ ಜತೆ ಕೆಲಸ ಮಾಡಿದೆ. ಮುಂದೆಯೂ ಸಂಸ್ಥೆಯ ಎಲ್ಲಾ ಉತ್ತಮ ಕೆಲಸಗಳಿಗೆ ಶಾಸಕರು ಸಹಕಾರ ನೀಡುವ ಭರವಸೆ ಇದೆ ಎಂದರು.
ಪಡಿ ಸಂಸ್ಥೆಯ ಜಿಲ್ಲಾ ಸಂಯೋಜಕಿ ಲಲಿತಾ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಪಡಿ ಸಂಸ್ಥೆಯು ರಾಜ್ಯದ 8 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಹಕ್ಕಿನ ಕುರಿತು ಚುನಾಯಿತ ಜನಪ್ರತಿನಿಧಿ ಗಳಿಗೆ ಕಾರ್ಯಾಗಾರಗಳನ್ನು ನಡೆಸಿ ಮಾಹಿತಿ ನೀಡುತ್ತಿದೆ. ಸುಮಾರು 800 ಫಲಾನುಭವಿಗಳಿಗೆ ಕಿಟ್ ಕಿಟ್ ವಿತರಿಸುವ ಕಾರ್ಯ ನಡೆಸಿದೆ ಎಂದರು.
ಪಡಿಯ ವಿಭಾಗ ಸಂಯೋಜಕಿ ರಾಜೇಶ್ವರಿ ಸ್ವಾಗತಿಸಿ, ವಂದಿಸಿದರು.

