ಬಂಟ್ವಾಳ: ಕಾಶ್ಮೀರ ಶ್ರೀನಗರದ ಸಫಾ ಕದಲ್ ಪ್ರದೇಶದಲ್ಲಿ ಸರಕಾರಿ ಶಾಲೆಯೊಂದರ ಪ್ರಾಂಶುಪಾಲ ಸತೀಂದರ್ ಕೌರ್ ಹಾಗೂ ಶಿಕ್ಷಕ ದೀಪಕ್ ಚಾಂದ್ ಅವರನ್ನು ಭಯೋತ್ಪಾದಕರು ಅಮಾನವೀಯವಾಗಿ ಹತ್ಯೆ ನಡೆಸಿರುವುದನ್ನು ಸರಕಾರಿ ಶಾಲೆ ಉಳಿಸಿ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ತೀವ್ರವಾಗಿ ಖಂಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಜ್ಞಾನವಂತರನ್ನಾಗಿ ಮಾಡುವ ಶಿಕ್ಷಕರನ್ನು ಗುರಿಯಾಗಿಸಿ ಭಯೋತ್ಪಾದಕರು ದಾಳಿ ನಡೆಸಿರುವುದು ಹೇಯ ಕೃತ್ಯ. ಇಂತಹ ಘಟನೆ ಮತ್ತೆ ಮರಕಳಿಸದಂತೆ ಸರಕಾರ ಎಚ್ಚರವಹಿಸಬೇಕು, ಭಯೋತ್ಪಾದಕ ಸಂಘಟನೆಗಳನ್ನು ಮಟ್ಟ ಹಾಕಿ ಕಾಶ್ಮೀರ ಪ್ರದೇಶದಲ್ಲಿ ನಿರ್ಭೀತವಾಗಿ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಒತ್ತಾಯಿಸಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿ ಪಡಿಸುವ ಜೊತೆಗೆ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯ ನಡೆಸುತ್ತಿರುವ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ಕಾಶ್ಮೀರದಲ್ಲೂ ಸರಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃಧ್ಧಿ ಪಡಿಸುವ ಯೋಜನೆಯನ್ನು ಹಾಕಿಕೊಂಡಿದ್ದು ದೆಹಲಿಯ ತಂಡ ಈ ಬಗ್ಗೆ ಕಾರ್ಯಪ್ರವೃತ್ತವಾಗಿತ್ತು. ಬಳಿಕ ಕೋವಿಡ್‌ನಿಂದಾಗಿ ತಾತ್ಕಲಿಕವಾಗಿ ಈ ಶಾಲೆ ದತ್ತು ಸ್ವೀಕಾರದ ಪ್ರಕೃಯೆ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಈ ಬಗ್ಗೆ ಕಾರ್ಯಪ್ರವೃತ್ತರಾಗುವ ಸಂದರ್ಭದಲ್ಲಿಯೇ ಉಗ್ರರ ಅಟ್ಟಹಾಸ ನಡೆದಿದೆ. ಆದರೆ ಯಾವುದೇ ಕಾರಣಕ್ಕೂ ಕಾಶ್ಮೀರದಲ್ಲಿ ಶಾಲೆ ದತ್ತು ಸ್ವೀಕರಿಸುವ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರಕಾಶ್ ಅಂಚನ್ ತಿಳಿಸಿದ್ದಾರೆ.

