ವಿಟ್ಲ: ಕೇಪು ಕಲ್ಲಂಗಳ ಸರಕಾರಿ ಪ್ರೌಢಶಾಲೆಯಲ್ಲಿ 2019-20ನೇ ಸಾಲಿನ ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾ ಕೂಟ ಮತ್ತು ಕ್ರೀಡಾಂಗಣ ನಿರ್ಮಾಣದ ಪ್ರಯುಕ್ತ ಸಭೆ, ಆಟಿ ಕೂಟ ಕಾರ್ಯಕ್ರಮ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಸರಕಾರದಿಂದ ನೀಡಲ್ಪಟ್ಟ ೧೧ ನೂತನ ಗಣಕಯಂತ್ರಗಳನ್ನು ನೂತನ ಗಣಕಯಂತ್ರಗಳ ಉದ್ಘಾಟನೆ ನಡೆಯಿತು.
ಸಂಜೀವ ಮಠಂದೂರು ಮಾತನಾಡಿ ಶಿಕ್ಷಣದಲ್ಲಿ ನೈತಿಕ ಮತ್ತು ಬೌದ್ಧಿಕ ಶಿಕ್ಷಣವನ್ನು ಬೆಳೆಸಿಕೊಳ್ಳಬೇಕು. ಶಾಲಾ ಮಕ್ಕಳ ಫಲಿತಾಂಶದಲ್ಲಿ ಶೇ. ನೂರು ಬರುವ ಹಾಗೆ ಪ್ರಯತ್ನಿಸಬೇಕು. ಶಾಲೆಯ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಭರಿಸುತ್ತೇನೆ ಎಂದರು.
ರಾಧಾಕೃಷ್ಣ ಚೆಲ್ಲಡ್ಕ ಆಟಿಯ ಕೂಟದ ಹಲವು ವಿಶೇಷ ಮಾಹಿತಿಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂ.ಸದಸ್ಯರಾದ ಜಯಶ್ರೀ ಕೋಡಂದೂರು, ಗ್ರಾ.ಪಂ ಅಧ್ಯಕ್ಷರಾದ ತಾರಾನಾಥ ಆಳ್ವ, ಪ್ರಭಾಕರಶೆಟ್ಟಿ ದಂಬೆಕಾನ, ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷರಾದ ಬಾಲಚಂದ್ರ ಕೆ, ರಾಜ್ಯ ಪುರಸ್ಕೃತ ರಮೇಶ ಎಂ ಬಾಯರ್, ಗ್ರಾ.ಪಂ. ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪೋಷಕರು ಈ ಸಭೆಯಲ್ಲಿ ಹಾಜರಿದ್ದರು.
ವಿದ್ಯಾರ್ಥಿನಿಗಳಾದ ತ್ರಿಶಾಲಿ ಕುಮಾರಿ. ಪ್ರತೀಕ್ಷ ಮತ್ತು ಗೀತಾ ಪ್ರಾರ್ಥಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಮಾಲತಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ವರದಿಯ ಜೊತೆಗೆ ಸ್ವಾಗತಿಸಿದರು. ಲಕ್ಷ್ಮಣ್ ಟಿ.ನಾಯ್ಕ ವಂದಿಸಿದರು. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.
