ವಿಟ್ಲ: ಕೇಪು ಗ್ರಾಮ ವ್ಯಾಪ್ತಿಯ ಕಲ್ಲಂಗಳ ಎಂಬಲ್ಲಿ ರಾತ್ರಿ ವೇಳೆ ವಾಹನದಲ್ಲಿ ಸಂಚರಿಸುವವರನ್ನು ತಡೆದು ಬೆದರಿಸಿ ಹಣ ಲಪಟಾಯಿಸುವುದು, ಸರ ಕಳ್ಳತನ ಇತ್ಯಾದಿ ಪ್ರಕರಣಗಳು ನಡೆದರೂ ಸಂಬಂಧಪಟ್ಟ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ. ಕೇರಳ ರಾಜ್ಯದ ವಾಹನಗಳಲ್ಲಿ ರಾತ್ರಿ ನಮ್ಮ ಸುತ್ತಮುತ್ತ ಓಡಾಡಿಕೊಂಡು ನಿರ್ಭೀತವಾಗಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಕೇರಳ ಮಾದರಿಯಲ್ಲೇ ಕೃಷಿಕರಿಗೆ ಕೃಷಿ ಇಲಾಖೆಯ ಸಹಾಯಧನ ವಿತರಣೆಯಾಗಬೇಕು..
ಕೇಪು ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಂದ ಕೇಳಿ ಬಂದ ಪ್ರಮುಖ ಬೇಡಿಕೆಗಳು. ಕೇಪು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಶನಿವಾರ ಗ್ರಾ.ಪಂ. ಅಧ್ಯಕ್ಷ ತಾರಾನಾಥ ಆಳ್ವ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು.
ಕೇಪು ಬೀಟ್ ಪೊಲೀಸ್ ವೀರೇಶ್ ಯಾವುದೇ ಕ್ರಿಮಿನಲ್ ವಿಚಾರಕ್ಕೆ ಸಂಬಂಧಿಸಿ ಬೀಟ್ ಕರ್ತವ್ಯದ ಪೊಲೀಸ್ ಅಥವಾ ಪೊಲೀಸ್ ಠಾಣೆಗೆ ತಕ್ಷಣ ಮೌಖಿಕ ಮಾಹಿತಿ ನೀಡಿ, ಬಳಿಕ ಲಿಖಿತ ದೂರು ಸಲ್ಲಿಸಿ ಎಂದು ಉತ್ತರಿಸಿದರು.
ಅಡ್ಯನಡ್ಕ ಪೇಟೆಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ತುಂಬಿಕೊಂಡಿದೆ. ಆರೋಗ್ಯ ಇಲಾಖೆಯ ಪ್ರತಿಯೊಂದು ಮಾಹಿತಿಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಗ್ರಾಮದ ಜನರಿಗೆ ತಲುಪಿಸಿಬೇಕು ಎಂದು ತಿಳಿಸಿದರು.
ಪವರ್‌ಮ್ಯಾನ್‌ಗಳ ನಿರ್ಲಕ್ಷ್ಯದಿಂದ ಹಲವಾರು ಕಡೆ ವಿದ್ಯುತ್ ತಂತಿಗಳ ಮೇಲೆ ಮರಗಳ ಗೆಲ್ಲುಗಳು ಆವರಿಸಿ ಅಪಾಯ ತಂದೊಡ್ಡುವ ಬಗ್ಗೆ ಗಂಭೀರವಾಗಿ ಗಮನಹರಿಸಬೇಕೆಂದು ಒತ್ತಾಯಿಸಲಾಯಿತು. ಈ ಬಗ್ಗೆ ತಕ್ಷಣ ಸ್ಪಂದಿಸುವುದಾಗಿ ಉಕ್ಕುಡ ವಿಭಾಗಾಧಿಕಾರಿ ಭರವಸೆ ನೀಡಿದರು.
ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಸುಧಾ ಜೋಶಿ ಮಾತನಾಡಿ ಹೆತ್ತವರು, ಪೋಷಕರು ತಮ್ಮ ಮಕ್ಕಳ ಪ್ರತಿಯೊಂದು ಚಲನವಲನಗಳ ಬಗ್ಗೆ ಕಣ್ಗಾವಲು ಇಡಬೇಕು. ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾಗಲಿದೆ. ಮಹಿಳೆಯರಿಗೆ ಸಂಬಂಧಿಸಿ ಕೇಂದ್ರ ಸರಕಾರ ಜಾರಿ ತಂದಿರುವ ಯೋಜನೆಗಳ ಬಗ್ಗೆ ಸ್ಥಳೀಯ ಅಂಗನವಾಡಿಗಳಲ್ಲಿ ಮಾಹಿತಿ ಪಡೆದು ಸದ್ವಿನಿಯೋಗಿಸಿ ಕೊಳ್ಳಿ ಎಂದರು.
ಕಂದಾಯ, ಆರೋಗ್ಯ, ಕೃಷಿ, ತೋಟಗಾರಿಕೆ, ಮೆಸ್ಕಾಂ, ಆರಕ್ಷಕ ಇಲಾಖೆಯವರು ಇಲಾಖಾ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ತಾಲೂಕು ಪಂಚಾಯಿತಿ ಸದಸ್ಯೆ ಕವಿತಾ ಸುಬ್ಬ ನಾಯ್ಕ, ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ಸದಸ್ಯರಾದ ಮಾಲತಿ ಬಿ., ಕೇಶವ ಉಪಾಧ್ಯಾಯ ಮಣಿಮುಂಡ, ಸುಮಿತ್ರಾ ಮರಕ್ಕಿಣಿ, ಅಬ್ದುಲ್ ಕರೀಂ ಕುದ್ದುಪದವು, ರತ್ನಾ ಕಲ್ಲಂಗಳ, ನಿರಂಜನ ಕೆ, ದಿವ್ಯಾ ಮೈರ, ಶಶಿಕಲಾ ಖಂಡಿಗ, ರೇಖಾ ದೇವುಮೂಲೆ, ಹರೀಶ್ ನಾಯ್ಕ್ ಖಂಡಿಗ, ವಿಠಲ ನಾಯ್ಕ ಕೋಪ್ರೆ, ಪುಷ್ಪಾಕರ ರೈ ಚೆಲ್ಲಡ್ಕ, ಲತಾ ಎ., ದಯಾನಂದ ಬೀಜದಡ್ಕ, ಪಿಡಿಒ ನಳಿನಿ, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
