ಕೇಪು : ಲೌಕಿಕ ಜೀವನದಲ್ಲಿ ಲೆಕ್ಕಮೀರಿ ಗಳಿಸುವುದಕ್ಕೆ ಅವಕಾಶವಿಲ್ಲ. ಆದರೆ ಧರ್ಮಕ್ಷೇತ್ರದಲ್ಲಿ ಲೆಕ್ಕ ಮೀರಿ ಗಳಿಸಲು ಸಾಧ್ಯವಿದೆ. ಅದು ಪರಲೋಕದಲ್ಲಿ ಪರಿಗಣಿಸಲ್ಪಡುತ್ತದೆ. ಅದಕ್ಕೆ ಭಗವಂತನ ಅನುಗ್ರಹವಿರುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.
ಅವರು ಶುಕ್ರವಾರ ಕೇಪು ಖಂಡಿಗ ಶ್ರೀ ಕೈಲಾಸೇಶ್ವರ ದೇವ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ದೇವಾಲಯದಲಿಶ್ರೀ ಅಯ್ಯಪ್ಪ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶದ ಬಳಿಕ ನಡೆದ ಧಾರ್‍ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಬದುಕಿನ ಶ್ರಮ, ಸಾಧನೆ, ಸಂಪಾದನೆಯೆಲ್ಲವೂ ಕ್ಷೇತ್ರ ನಿರ್‍ಮಾಣಕ್ಕೆ ಸಂದಿದೆ. ಸಮಾಜ ಗುರುತಿಸುವ ಕಾರ್‍ಯವಾಗಿದೆ. ಇಲ್ಲಿ ಶಿವನ ಸಾನ್ನಿಧ್ಯವಿದೆ. ಅಯ್ಯಪ್ಪ ಸ್ವಾಮಿ ದೇವರ ಸಾನ್ನಿಧ್ಯವೂ ಸಿಕ್ಕಿದೆ. ಇದೀಗ ಗೋಶಾಲೆಯೂ ನಿರ್‍ಮಾಣವಾಗಿದೆ. ೩೩ ಕೋಟಿ ದೇವತೆಗಳ ಆವಾಸಸ್ಥಾನದ ಸಾನ್ನಿಧ್ಯವೂ ಸೇರ್ಪಡೆಯಾಗುತ್ತದೆ. ಈ ಗೋಶಾಲೆಯಲ್ಲಿ ಗೋವುಗಳು ತುಂಬಬೇಕು. ಈ ಗೋಶಾಲೆಗೆ ರಾಮಚಂದ್ರಾಪುರ ಮಠದಿಂದ ಗೋವುಗಳನ್ನು ಕೊಡುಗೆಯಾಗಿ ನೀಡಲಾಗುತ್ತದೆ ಎಂದು ಹೇಳಿದರು.
ಬ್ರಹ್ಮಶ್ರೀ ವೇ.ಮೂ.ಪಳ್ಳತ್ತಡ್ಕ ಪರಮೇಶ್ವರ ಭಟ್, ಮಾಡಾವು ವೆಂಕಟ್ರಮಣ ಜೋಯಿಸರು, ಮಹಾಮಂಡಲ ಅಧ್ಯಕ್ಷೆ ಈಶ್ವರೀ ಶ್ಯಾಮ ಭಟ್ ಬೇರ್ಕಡವು, ಕಾರ್‍ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು, ಆರ್.ಡಿ.ಶಾಸ್ತ್ರಿ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಉಪಸ್ಥಿತರಿದ್ದರು.
ಆಡಳಿತ ಮೊಕ್ತೇಸರ ರವೀಶ್ ಕೆ.ಎನ್.ಖಂಡಿಗ ಸ್ವಾಗತಿಸಿದರು. ಜನಾರ್ದನ ಭಟ್ ಅಮೈ ನಿರೂಪಿಸಿ, ವಂದಿಸಿದರು.
ಬೆಳಗ್ಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪ್ರತಿಷ್ಠಾ ಕಾರ್‍ಯ ನಡೆಯಿತು. ಬಳಿಕ ಕಲಶಾಭಿಷೇಕ, ಶತ ರುದ್ರಾಭಿಷೇಕ, ಕಲ್ಫೋಕ್ತ ಪೂಜೆ, ನಾನಾ ತಂಡಗಳಿಂದ ಭಜನಾ ಕಾರ್‍ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಬಳಿಕ ಅಡ್ಯನಡ್ಕ ಹವ್ಯಾಸಿ ಯಕ್ಷಕಲಾ ಸಂಘ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ’ಭಸ್ಮಾಸುರ ಮೋಹಿನಿ’ – ’ಶಬರಿಮಲೆ ಅಯ್ಯಪ್ಪ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
