ವಿಟ್ಲ: ಕೇಪು ಗ್ರಾಮದ ಖಂಡಿಗ ಶ್ರೀ ಕೈಲಾಸೇಶ್ವರ ದೇವರ ಸನ್ನಿದಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮೀ ದೇವರ ಸಂಪೂರ್ಣ ಶಿಲಾಮಯ ಗರ್ಭಗುಡಿ, ಸುತ್ತುಪೌಳಿ, 18 ಮೆಟ್ಟಿಲು ನಿರ್‍ಮಾಣವಾಗಿ ಲೋಕಾರ್ಪಣೆಗೆ ಸಿದ್ಧಗೊಂಡಿದ್ದು, ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ.19 ರಿಂದ 23ರ ವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ರವೀಶ್ ಕೆ.ಯನ್ ಖಂಡಿಗ ತಿಳಿಸಿದರು.
ಅವರು ವಿಟ್ಲದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬ್ರಹ್ಮಶ್ರೀ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ ಮತ್ತು ಮಾಡಾವು ಶ್ರೀ ವೆಂಕಟ್ರಮಣ ಜೋಯಿಸರ ನೇತೃತ್ವದಲ್ಲಿ ನಾನಾ ಧಾರ್‍ಮಿಕ ವಿಧಿವಿಧಾನಗಳು ನಡೆಯಲಿದೆ. 19ರಂದು ಬೆಳಗ್ಗೆ ಕೇಪು ಕಲ್ಲಂಗಳದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ದ್ವಾರದಿಂದ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಶ್ರೀ ಅಯ್ಯಪ್ಪ ದೇವಸ್ಥಾನದಿಂದ, ವಿಟ್ಲದಿಂದ ಉಕ್ಕುಡ ಮಾರ್ಗವಾಗಿ ಮತ್ತು ಪುಣಚ ಗ್ರಾಮದ ಪರಿಯಾಲ್ತಡ್ಕದಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಬಳಿಕ ಉಗ್ರಾಣ ಮುಹೂರ್ತ, ಸ್ಥಳೀಯ ವಲಯ ಸಮಿತಿಗಳಿಂದ ಹಾಗೂ ಗ್ರಾಮಸ್ಥರಿಂದ ಇತರ ತಾಲೂಕುಗಳಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ನಡೆಯುವ ಧಾರ್‍ಮಿಕ ಸಭೆಯೊಂದಿಗೆ ಗ್ರಾಮ-ಗ್ರಾಮಗಳ ಸಂಗಮ , ಗ್ರಾಮಗಳ ಜನಪ್ರತಿನಿಧಿಗಳು, ಮಂದಿರ, ಸಂಸ್ಥೆಗಳ ಗುರುಸ್ವಾಮಿಗಳ ಹಾಗೂ ಅಯ್ಯಪ್ಪ ಭಕ್ತರ ಸಂಗಮ, ಮಾತಾಪಿತರ ಸಂಗಮ, ಸಂತರ ಸಂಗಮ ಹಾಗೂ ಸನ್ಮಾನ ಕಾರ್‍ಯಕ್ರಮಗಳು ನಡೆಯಲಿದೆ ಎಂದರು.
ಮಾ. 19ರಂದು ಸಂಜೆ ನಡೆಯುವ ಗ್ರಾಮ ಗ್ರಾಮಗಳ ಸಂಗಮದಲ್ಲಿ ಶ್ರೀಧಾಮ ಮಾಣಿಲ ಕ್ಷೇತ್ರದ ಮೋಹನದಾಸಪರಮಹಂಸ ಸ್ವಾಮೀಜಿ, ಬಲ್ಯೋಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ವಿಟ್ಲ ಅರಮನೆಯ ಜನಾರ್ದನ ವರ್ಮ ಅರಸರು ಮೊದಲಾದವರು ಭಾಗವಹಿಸಲಿದ್ದಾರೆ. ಮಾ.20ರಂದು ನಡೆಯುವ ಗುರುಸ್ವಾಮಿಗಳು ಹಾಗೂ ಅಯ್ಯಪ್ಪ ಭಕ್ತರ ಸಂಗಮದಲ್ಲಿ ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ನಾರಾಯಣ ಯಾನೆ ಬಟ್ಟು ಸ್ವಾಮೀ, ಕುಂಞಣ್ಣ ಗುರುಸ್ವಾಮಿ ಅಜ್ಜಿನಡ್ಕ, ಜನಾರ್ಧನ ಭಟ್ ಮೊದಲಾದವರು ಭಾಗವಹಿಸಲಿದ್ದಾರೆ. 21ರಂದು ನಡೆಯುವ ಮಾತಾಪಿತರ ಸಂಗಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವೀ ಮಾತಾನಂದಮಯೀ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಯಶ್ರೀ ಕೊಡಂದೂರು, ಈಶ್ವರ್ ಭಟ್, ಮೊದಲಾದವರು ಭಾಗವಹಿಸಲಿದ್ದಾರೆ.
ಮಾ.೨೨ರಂದು ಬೆಳಗ್ಗೆ 9.42ರ ಸುಮೂಹೂರ್ತದಲ್ಲಿ ಶ್ರೀಅಯ್ಯಪ್ಪ ಸ್ವಾಮಿ ಪ್ರತಿಷ್ಠೆ ನಡೆಯಲಿದ್ದು, ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಧಾರ್‍ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ವಿಟ್ಲ ಯೋಗೀಶ್ವರ ಮಠದ ಶ್ರೀ ರಾಜಗುರು ಶ್ರದ್ಧಾನಾಥಾಜೀ ಮಹಾರಾಜ ಭಾಗವಹಿಸಲಿದ್ದಾರೆ. ೨೩ರಂದು ನಡೆಯುವ ಧಾರ್‍ಮಿಕ ಸಭೆಯಲ್ಲಿ ಬಾಳೆಕೋಡಿ ಶಿಲಾಂಜನಾ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ, ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರದ ಮಹಾಬಲ ಸ್ವಾಮೀಜಿ, ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಸೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಕೋಶಾಧಿಕಾರಿ ಗೋವಿಂದರಾಯ ಶೆಣೈ ಅಡ್ಯನಡ್ಕ ಉಪಸ್ಥಿತರಿದ್ದರು.
