ಬಂಟ್ವಾಳ : ದೇಶವ್ಯಾಪಿ ಪ್ರತೀ ವರ್ಷ 1.40 ಕೋಟಿ ಜನರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು, ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಜಾಗೃತಿ ಸಮಿತಿಗಳನ್ನು ರಚಿಸಿ ಆ ಮೂಲಕ ಅಭಿವೃದ್ಧಿ ಕುರಿತಾಗಿ ಚರ್ಚೆ ನಡೆಸಬೇಕಿದೆ, ಸರಕಾರದ ಯೋಜನೆಗಳು ಅನುಷ್ಠಾನಗೊಂಡು ಗ್ರಾಮಮಟ್ಟದಲ್ಲಿ ಅನುಷ್ಠಾನ ಹಬ್ಬಗಳು ನಡೆಯಬೇಕು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ನಾರಾಯಣ ಸ್ವಾಮಿ ಹೇಳಿದ್ದಾರೆ.


ದ.ಕ.ಜಿಲ್ಲಾಡಳಿತ,ದ.ಕ.ಜಿ.ಪಂ.,ಸಮಾಜ ಕಲ್ಯಾಣ,ಹಿ.ವರ್ಗಗಳ ಕಲ್ಯಾಣ ಹಾಗೂ ಪ.ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಬ್ರಹ್ಮರಕೂಟ್ಲುವಿನಲ್ಲಿರುವ ಬಂಟವಾಳದ ಬಂಟರಭವನದಲ್ಲಿ ನಡೆದ “ಅಂತ್ಯೋದಯ” ಇಲಾಖೆಗಳ ವಿವಿಧ ಯೋಜನೆಗಳ ರಾಜ್ಯಮಟ್ಟದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಳಿಕ ಸಮಾಜಸುಧಾರಣೆಯಲ್ಲಿ ತೊಡಗಿಸಿಕೊಳ್ಳ ಬೇಕಾದ ಸಂಘಟನೆಗಳು ಧಿಕ್ಕಾರ, ಜೈಕಾರಕ್ಕೆ ಸೀಮಿತವಾಗಿದ್ದರಿಂದ ಸಾಮಾಜಿಕ ಸುಧಾರಣೆಗಳಿಗೆ ಕೊರತೆಯಾಗಿದೆ ಎಂದ ಅವರು ಸಮಾಜ ಕಲ್ಯಾಣ ಇಲಾಖೆ ಇಡೀ ಸಮಾಜದ ಕಸ್ಟೋಡಿಯನ್ ಆಗಿ ಕಾರ್ಯನಿರ್ವಹಿಸಬೇಕು ಎಂದರು. ಪ್ರತಿಯೊಬ್ಬರು ಸ್ವಾವಲಂಬಿಯಾಗದ ಹೊರತು ಸ್ವಾಭಿಮಾನಿಯಾಗಲು ಸಾಧ್ಯವಿಲ್ಲ,
ಅಂತ್ಯೋದಯದ ಪರಿಕಲ್ಪನೆಯಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜನೆಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಅಭಿನಂದಿಸಿದ ಸಚಿವರು ಪ್ರತಿಯೊಬ್ಬ ಗ್ರಾ.ಪಂ.ಸದಸ್ಯರು ಕೇಂದ್ರ ಮತ್ತು ರಾಜ್ಯದ ಯೋಜನೆಗಳ ಬಗ್ಗೆ ತಿಳಿದು ಕೊಂಡು ಗ್ರಾಮಮಟ್ಟದಲ್ಲಿ ಗುಂಪುಚರ್ಚೆಯ ಮೂಲಕ ಅದನ್ನು ವಿಸ್ತರಿಸಬೇಕು ಸಲಹೆ ನೀಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ದೀನ್ ದಯಾಳ್ ಉಪಾಧ್ಯಾಯರ ಕನಸನ್ನು ಸಾಕಾರಗೊಳಿಸುವ ಈ ಕಾರ್ಯಕ್ರಮ, ಪಂಚಾಯತ್ ಸದಸ್ಯರ ಭಾಗವಹಿಸುವಿಕೆ ಮೂಲಕ ಯಶಸ್ವಿಯಾಗಿದೆ ಎಂದರು.
ಯೋಜನೆ ಜನರಿಗೆ ತಲುಪಲಿ:
ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರನ್ನು ಸನ್ಮಾನಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಪ್ರತಿ ಗ್ರಾ.ಪಂ.ಗೂ 15 ನೇ ಹಣಕಾಸಿನ ಯೋಜನೆಯಲ್ಲಿ ನೇರ ಅನುದಾನ ಒದಗಿಸಲಾಗುತ್ತಿದೆ. ತ್ರಿಸ್ಥರ ವ್ಯವಸ್ಥೆಯಡಿಯಲ್ಲಿ ಇರುವ ಪಂಚಾಯತ್ ವ್ಯವಸ್ಥೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಆಗಲಿ ಎಂದರು. ರಾಷ್ಟ್ರದಲ್ಲೇ ಮೊದಲ ಬಾರಿಗೆ ಇಂತಹಾ ಪರಿಕಲ್ಪನೆಯ ಕಾರ್ಯಕ್ರಮ ನಡೆಯುತ್ತಿದ್ದು,ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಯಾವುದೇ ಖಾತೆ ಕೊಟ್ಟರೂ, ಅಲ್ಲಿನ ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕೆನ್ನುವ ನಿಟ್ಟಿನಲ್ಲಿ ನಿರಂತರ ಶ್ರಮ ವಹಿಸುತ್ತಾರೆ ಎಂದು ಶ್ಲಾಘಿಸಿದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಪ್ರಸ್ತಾವಿಸಿ, ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಗ್ರಾ.ಪಂ.ನ್ನು ಕೇಂದ್ರೀಕರಿಸಿ ಆನ್ ಲೈನ್ ಮೂಲಕವೇ ಫಲಾನುಭವಿಗಳ ಅರ್ಜಿಯನ್ನು ಸ್ವೀಕರಿಸಲು ನಿರ್ಧರಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಬಜೆಟ್ ನಲ್ಲಿ ಕಾದಿರಿಸಲಾದ ಅನುದಾನವನ್ನು ನಿಗದಿತ ಉದ್ದೇಶಗಳಿಗೆ ಬಳಸಿಕೊಂಡು ಯಾವುದೇ ಕಾರಣಕ್ಕು ಲ್ಯಾಪ್ಸ್ ಅಗದಂತೆ ನೋಡಿಕೊಳ್ಳಲಾಗುವುದು ಎಂದರು. ಜಾತಿ ಧರ್ಮದ ಸಮಾಜದ ಸ್ವಸ್ಥತೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು, ಕರ್ನಾಟಕ ರಾಜ್ಯದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಇಲಾಖೆ ವತಿಯಿಂದ ಮುಂದಿನ ದಿನದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ದ ಅಧ್ಯಕ್ಷ ಜಿ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮೀಸಲಾತಿ ವಿಚಾರದಲ್ಲಿ ಸಾಮಾಜಿಕ, ಶೈಕ್ಷಣಿಕ ವಿಚಾರ ಧಾರೆಗಳನ್ನು ಆಧರಿಸಿ ಮೀಸಲಾತಿ ನೀಡಬೇಕೆನ್ನುವುದು ಅಂಬೇಡ್ಕರ್ ನೀತಿಯಾಗಿದೆ.ಮೌಲ್ಯಗಳು , ಜನಸಾಮಾನ್ಯರಿಗೆ ಬೇಕಾದ ವಿಷಯಗಳು ಆಡಳಿತದಲ್ಲಿದ್ದರೆ ಅದು ಮಾತ್ರ ಅದು ರಾಜಕಾರಣ ಆಗುತ್ತದೆ ಎಂದರು. ಕೆಲ ಜಾತಿಗಳು ಎಸ್ಸಿ, ಎಸ್.ಟಿ ಯಲ್ಲು ಸೇರಿಕೊಂಡಿರುವುದರಿಂದ ಜಾತಿ ಪ್ರಮಾಣ ಪತ್ರ ನೀಡುವುದು ಸಮಸ್ಯೆಯಾಗಿದೆ,ಈ ಬಗ್ಗೆ ಸರ್ಕಾರ ಸರಿಯಾದ ರೀತಿಯಲ್ಲಿ ನಿರ್ಧಾರಕೈಗೊಳ್ಳ ಬೇಕಾಗಿದೆ ಎಂದರು. ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಎನ್.ನಾಗಾಂಬಿಕಾ ದೇವಿ, ಎಂಎಲ್ಸಿ ರವಿಕುಮಾರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಶಾಸಕರಾದ ಡಾ.ಭರತ್ ಶೆಟ್ಟಿ, ಹರೀಶ್ ಪೂಂಜ, ಸಂಜೀವ ಮಠಂದೂರು,ಯು.ಟಿ.ಖಾದರ್, ಪ್ರೊ.ಲಿಂಗಣ್ಣ, ಎಂಎಲ್ ಸಿ ಪ್ರತಾಪ್ ಸಿಂಹ ನಾಯಕ್, ತುಂಬೆ ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಬಿ., ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ, ಆರ್ಯ ವೈಶ್ಯ ನಿಗಮದ ಅಧ್ಯಕ್ಷ ಅರುಣ್, ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಎಲ್.ಹನುಮಂತಪ್ಪ, ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್,ದಿ.ಮೈಸೂರು ಎಲೆಕ್ಟ್ರೀಕಲ್ ಇಂಡಸ್ಟ್ರೀಸ್ ಲಿ.ಅಧ್ಯಕ್ಷ ಸಂತೋಷ್ ಕುಮಾರ್ ರೈ, ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾದ ರವಿಕುಮಾರ್, ಹಿಂದುಳಿದ ವರ್ಗಗಳ ಇಲಾಖಾ ಆಯುಕ್ತ ಪಿ.ವಸಂತ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ,ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ದೇಶ್ವರ ಎನ್. ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಯೋಗೀಶ್ ಹಾಗೂ ವಿವಿಧ ಇಲಾಖಾಧಿಕಾರಿಗಳು ವೇದಿಕೆಯಲ್ಲಿದ್ದರು. ಈ ಸಂದರ್ಭ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೋರಾರ್ಜಿ ದೇಸಾಯಿ ವಸತಿಶಾಲೆಯ ಐವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದ.ಕ.ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ ಸ್ವಾಗತಿಸಿದರು.ಹಿ.ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಸಚಿನ್ ಕುಮಾರ್ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಮಾಜಕಲ್ಯಾಣ,ಹಿ.ವರ್ಗ,ಪರಿಶಿಷ್ಠ ವರ್ಗ ಕಲ್ಯಾಣ ಇಲಾಖೆಗಳ ವಿವಿಧ ಯೋಜನೆಗಳ ಮಾಹಿತಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳು ನೀಡಿದರು.ಮಧ್ಯಾಹ್ನದ ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.
ಉದ್ಘಾಟನೆಯ ಬಳಿಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಶುಭಾಶಂಸನೆಯ ವೀಡಿಯೋವನ್ನು ಪ್ರದರ್ಶಿಸಲಾಯಿತು.
ಕಾರ್ಯಾಗಾರದಲ್ಲಿ ಪುತ್ತೂರು ವಿವೆಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್,ಮಾಜಿ ಶಾಸಕರಾದ ರುಕ್ಮಯಪೂಜಾರಿ, ಪದ್ಮನಾಭಕೊಟ್ಟಾರಿ, ಪ್ರೋ.ಎಂ.ಬಿ.ಪುರಾಣಿಕ್ , ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್ .ಆರ್, ಇಓ ರಾಜಣ್ಣ, ಸಹಾಯಕ ಕಮಿಷನರ್ ಮದನ್ ಮೋಹನ್,ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಕ.ನ.ನೀ.ಸ.ಒ.ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಸಹಿತ ಹಲವಾರು ಗಣ್ಯರು , ಗ್ರಾಪಂ.ಅಧ್ಯಕ್ಷ , ಉಪಾಧ್ಯಕ್ಷರು ಸದಸ್ಯರು ಭಾಗವಹಿಸಿದ್ದರು.

