ವಿಟ್ಲ: ವಿಟ್ಲದ ವೀರಕಂಭ ಗ್ರಾಮದ ಕೆಲಿಂಜ ಎಂಬಲ್ಲಿ ಶಾರ್ಟ್ ಸರ್ಕಿಟ್‌ನಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಮನೆ ಭಾಗಶಃ ಹಾನಿಗೊಂಡಿದ್ದು, ಏಳು ಲಕ್ಷ ರೂ. ಬೆಲೆಬಾಳುವ ಅಡಕೆ ಸುಟ್ಟು ಕರಲಾದ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಕೆಲಿಂಜ ನಿವಾಸಿ ಜೂಲಿಯಾನ್ ಪಾಯಸ್ ಅವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಇವರ ಮನೆಯ ಒಂದು ಭಾಗ ಸ್ಲ್ಯಾಪ್‌ನಿಂದ ಇನ್ನೊಂದು ಭಾಗ ಹಂಚು ಪಕ್ಕಾಸ್‌ನಿಂದ ನಿರ್ಮಿಸಲಾಗಿದೆ. ಮಧ್ಯರಾತ್ರಿ ಮನೆಯ ಒಳಗಡೆ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಹಂಚಿನ ಛಾವಣಿಯಲ್ಲಿ ಒಣಗಿಸಲು ಇಟ್ಟಿದ್ದ ಒಣ ಅಡಕೆ ಸುಟ್ಟು ಕರಕಲಾಗಿದೆ. ಹಂಚಿನ ಭಾಗದ ನಾಲ್ಕು ಕೋಣೆಗಳಿಗೂ ಬೆಂಕಿ ಆವರಿಸಿಕೊಂಡು ವಸ್ತುಗಳು ಕರಕಲಾಗಿದೆ.
ಮನೆಯಲ್ಲಿ ಆರು ಮಂದಿ ಬೇರೆ ಬೇರೆ ಕೋಣೆಯಲ್ಲಿ ಮಲಗಿದ್ದರು. ಬೆಳಗ್ಗೆ ೫ ಗಂಟೆ ವೇಳೆ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಮನೆಮಂದಿ ಎಲ್ಲಾ ಬೆಂಕಿ ನಂದಿಸಲು ಮುಂದಾಗಿದ್ದು, ಈ ಸಂದರ್ಭ ಇಬ್ಬರು ಗಾಯಗೊಂಡಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸಿದಂತೆ ಅನಿಲ ಸಿಲಿಂಡರ್‌ಗಳನ್ನು ಹೊರಗಡೆ ಎಸೆಯಲಾಗಿದೆ. ಅಷ್ಟೊತ್ತಿಗೆ ಮನೆಯ ಪಕ್ಕಾಸು, ಅದರ ಮುಚ್ಚಿಗೆ, ಚಯರ್‌ಗಳು, ಫ್ಯಾನ್, ಕಪಾಟು, ಸೇರಿದಂತೆ ಮನೆಯ ವೈಯರಿಂಗ್ ಸಂಪೂರ್ಣವಾಗಿ ನಾಶ ಹೊಂದಿದೆ. ಎರಡು ವರ್ಷಗಳ ಕಾಲ ಇಟ್ಟಿದ್ದ ಏಳು ಲಕ್ಷ ರೂ. ಬೆಲೆಬಾಳುವ ಅಡಕೆ ರಾಶಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಂಕಿ ಅವಘಡದಿಂದ ಒಟ್ಟು ಅಂದಾಜು ೧೨ ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
