Wednesday, February 12, 2025

ಶಾಲಾ ಪ್ರಾರಂಭೋತ್ಸವ ಕೆದ್ದಳಿಕೆ ಹಿ.ಪ್ರಾ.ಶಾಲೆ

ಬಂಟ್ವಾಳ: ರಾಜ್ಯದೆಲ್ಲಡೆ ಶಾಲಾ ಪ್ರಾರಂಭೋತ್ಸವ ಬುಧವಾರ ಆರಂಭಗೊಂಡಿದ್ದು ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು.
ಜಿ.ಪಂ.ಸದಸ್ಯ ಬಿ. ಪದ್ಮಶೇಖರ ಜೈನ್ ಅವರು ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿ, ಮೆರವಣಿಗೆಯನ್ನು ಉದ್ಘಾಟಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಫಲ ಪುಷ್ಪ-ಹಾರಾರ್ಪಣೆ,ಆರತಿ ಬೆಳಗಿಸುವಿಕೆ ,ಸಿಹಿ ತಿಂಡಿ ವಿತರಣೆ ಕಾರ್ಯಕ್ರಮಗಳೊಂದಿಗೆ ಕೆದ್ದಳಿಕೆ ಶಾಲಾ ಪ್ರಾರಂಭೋತ್ಸವ ಸಂಪನ್ನಗೊಂಡಿತು.


ವಾದ್ಯ-ಬ್ಯಾಂಡ್‌ಗಳ ನಿನಾದ, ವಿವಿಧ ವೇಷ ಭೂಷಣಗಳ ಕುಣಿತ, ವಿವಿಧ ಘೋಷಣೆಗಳ ಆಕರ್ಷಣೆಯೊಂದಿಗೆ ನೂತನವಾಗಿ ಒಂದನೇ ತರಗತಿಗೆ ಸೇರ್ಪಡೆಗೊಂಡ ಮಕ್ಕಳನ್ನು ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ಇದೇ ವೇಳೆ ದಿಬ್ಬಣ ಮೆರವಣಿಗೆಯಲ್ಲಿ ಬಂದ ಮಕ್ಕಳನ್ನು ಶಾಲಾ ಬಳಿ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಪನ್ನೀರು ಸಿಂಪಡಿಸಿ , ಹೂ ಹಾಕಿ ಸ್ವಾಗತಿಸಿದರು. ಬಳಿಕ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಹಣ್ಣು ಹಂಪಲು ನೀಡಿ ಗೌರವಿಸಲಾಯಿತು. ಮಕ್ಕಳ ಹೆತ್ತವರು ಮಕ್ಕಳಿಂದ ಅಕ್ಕಿಯಲ್ಲಿ ಅಕ್ಷರ ಬರೆಸುವ ಮೂಲಕ ಅಕ್ಷರಾಭ್ಯಾಸಕ್ಕೆ ಆರಂಭ ನೀಡಲಾಯಿತು.
ಈ ಸಂದರ್ಭದಲ್ಲಿ ಊರವರಿಂದ ಶಾಲೆಗೆ ಹಸಿರು ಹೊರೆಕಾಣಿಕೆ ನೀಡಲಾಯಿತು. ತರಕಾರಿಗಳು, ಅಕ್ಕಿ, ತೆಂಗಿನಕಾಯಿ ಮೊದಲಾದ ಹಸಿರು ಹೊರೆಕಾಣಿಕೆ ಶಾಲೆಗೆ ಸಮರ್ಪಣೆಯಾಯಿತು. ಇದೇ ವೇಳೆ ಬಿ.ಪದ್ಮಶೇಖರ ಜೈನ್ ಹೊರೆ ಕಾಣಿಕೆ ಉಗ್ರಾಣವನ್ನು ಉದ್ಘಾಟಿಸಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಅವರು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮತ್ತು ಉಚಿತ ಲೇಖನ ಪುಸ್ತಕಗಳನ್ನು ವಿತರಿಸಿದರು.
ಗ್ರಾ.ಪಂ. ಅಧ್ಯಕ್ಷ ಸಂತೋಷ್ ಪೂಂಜ, ಮಾಜಿ ಅಧ್ಯಕ್ಷ ಬಾಲಕೃಷ್ಣ ಅಂಚನ್, ಗ್ರಾ.ಪಂ.ಸದಸ್ಯರಾದ ಸತೀಶ್ ಪಡಂತ್ರಬೆಟ್ಟು ,ಮೋಹನ ಆಚಾರ್ಯ, ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ ದಿವಾಕರ ದಾಸ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ರಾಜಗೋಪಾಲ, ಯೋಗೀಶ ಆಚಾರ್ಯ, ವಿಶಾಲಾಕ್ಷಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಪೂಜಾರಿ, ಪ್ರಮುಖರಾದ ಪ್ರವೀಣ್ ನಡಿಮಾರ್, ದಾಮೋದರ ಗುರಿಮಜಲು, ಶಾಲಾ ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಉಮಾ ಡಿ.ಗೌಡ ಸ್ವಾಗತಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಳಕಟ್ಟೆ ಪ್ರಸ್ತಾವಿಸಿದರು. ಶಿಕ್ಷಕ ಚಂದಪ್ಪ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

More from the blog

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...