ಮುಂಬಯಿ: ದಶ ವಾರ್ಷಿಕ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನವು ಇದೇ ಆದಿತ್ಯವಾರ (ಜ.20) ಸಂಜೆ 5 ಗಂಟೆಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಅಲ್ಲಿನ ಬಾಹುಬಲಿ ಬೆಟ್ಟದಲ್ಲಿನ ಶ್ರೀ ಗೋಮಟೇಶ್ವರ ಸನ್ನಿಧಿಯಲ್ಲಿ ಹತ್ತು ಮಹಾ ಕಾವಗಳ ಮಹಾ ಕವಿ ಡಾ| ಪ್ರದೀಪ್‌ಕುಮಾರ್ ಹೆಬ್ರಿ ಅಧ್ಯಕ್ಷತೆಯಲ್ಲಿ ಜರುಗಲಿದ್ದು, ೮೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಶ್ರೇಷ್ಠ ಸಾಹಿತಿ ಡಾ| ನಾ.ಡಿಸೋಜ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಜ್ಯೋತಿ ಗುರುಪ್ರಸಾದ್ ಕಾರ್ಕಳ ದಶಮಾನೋತ್ಸವ ಸಂಭ್ರಮದ ಬೆಳದಿಂಗಳ ಕವಿಗೋಷ್ಠಿ ಉದ್ಘಾಟಿಸಲಿದ್ದು ಮುಂಬಯಿಯ ಬಹುಮುಖ ಪ್ರತಿಭಾವಂತ ಕವಿ, ಕಥೆಗಾರ, ಗೋಪಾಲ ತ್ರಾಸಿ ಪ್ರಾರಂಭೋತ್ಸವ ಕವಿತೆ ಪ್ರಸ್ತುತ ಪಡಿಸಲಿರುವರು ಎಂದು ಎಂದು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಪತ್ರಕರ್ತ ಶೇಖರ ಅಜೆಕಾರು ತಿಳಿಸಿದ್ದಾರೆ.


ಸಮ್ಮೇಳನದಲ್ಲಿ ಗೋಪಾಲ ತ್ರಾಸಿ ಅವರ ಅಂಕಣಬರಹ ‘ಈ ಪರಿಯ ಕಥೆಯ’ ಕೃತಿಯೂ ಬಿಡುಗಡೆ ಗೊಳ್ಳಲಿದೆ. ಈಗಾಗಲೇ ಮೂರು ಕವನ ಸಂಕಲನ, ಒಂದು ಕಥಾಸಂಕಲನ, ಎರಡು ಸಂಪಾದಿತ ಕೃತಿಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವ ತ್ರಾಸಿ ಓರ್ವ ಕನ್ನಡದ ಸಂವೇದನಾಶೀಲ ಕವಿ ಎಂದೇ ಗುರುತಿಸಿ ಕೊಂಡಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಅಸೋಸಿಯೇಶನ್ ಆಫ್ ಕನ್ನಡ ಕೂಟ’ಸ್ ಆಫ್ ಅಮೇರಿಕಾ ಸಂಯೋಜಿತ ವಿಶ್ವದ ಪ್ರತಿಷ್ಠಿತ ಅಕ್ಕ ಸಂಸ್ಥೆಯು ಅಮೆರಿಕದ ಡಾಲಸ್ ನಗರದ ಶೆರಟಾನ್ ಸಮ್ಮೇಳನ ಸಭಾಗೃಹದಲ್ಲಿ ಆಯೋಜಿಸಿದ್ದ ಹತ್ತನೇ ವಿಶ್ವ ಅಕ್ಕ ಕನ್ನಡ ಸಮೇಳನದಲ್ಲಿ ನಾಡಿನ ಹೆಸರಾಂತ ಕವಿ ಜಯಂತ್ ಕಾಯ್ಕಿಣಿ ಅಧ್ಯಕ್ಷತೆಯಲ್ಲಿ ಜರಗಿದ ಶ್ರಾವಣ ಕವಿಗೋಷ್ಠಿಯಲ್ಲಿ ಗೋಪಾಲ ತ್ರಾಸಿ ತನ್ನದೇ ಆದ ಕಾವ್ಯತ್ಮಕ, ಆಕರ್ಷಕ ಶೈಲಿಯ ಗಾಯನದ ಮೂಲಕ ತನ್ನ ಕವಿತೆಯನ್ನು ಪ್ರಸ್ತುತ ಪಡಿಸಿ ಕನ್ನಡದ ಕಂಪನ್ನು ಪಸರಿಸಿವಿಶ್ವದ ಕವಿಮನಗಳನ್ನು ಗೆದ್ದಿರುವರು.
ಬಹುಮುಖ ಪ್ರತಿಭೆ ಆಗಿರುವ ತ್ರಾಸಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಕ್ರೀಯ ಸದಸ್ಯರೂ, ಕ್ರೀಡಾಪಟು ಕೂಡಾ ಆಗಿದ್ದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಿರಿಯ ಪ್ರಬಂಧಕ ಆಗಿ ಮುಂಬಯಿನಲ್ಲೇ ವೃತ್ತಿನಿರತರಾಗಿದ್ದಾರೆ.


