ಬುದ್ಧಿವಂತಿಕೆ
ಜಾಸ್ತಿಯಾಗಿ ಎಲ್ಲವನ್ನೂ
ಸೃಷ್ಟಿ ಮಾಡಲಾಗುತ್ತಿದೆ
ನೆಮ್ಮದಿಗಾಗಿ ಹುಡುಕಾಟ ನಡೆಯುತ್ತಲೇ ಇದೆ…!

ಅವನು ಇವನು ನಾನು
ಶ್ರೇಷ್ಠನಾರೆನ್ನುವ ಸಂಶೋಧನೆ
ಚಪ್ಪಾಳೆ ಗಿಟ್ಟಿಸಿ
ಬೆನ್ನುತಟ್ಟಿದಾಗ ಉಬ್ಬಿ ಹೋಗುವುದು
ಬುದ್ಧಿವಂತ ನೆಂಬ ಭ್ರಮೆಯಲ್ಲಿ..!
ದ್ವೇಷ ಹೆಚ್ಚಿದಂತೆ
ಶಕ್ತಿ ತೋರಿಸುವ ತವಕ
ಕೈಯಲ್ಲಿ ಮಾಡಿದ ಬಾಂಬಿನಿಂದ
ಕೈ ಮುಟ್ಟದೆ ಬಾಂಬ್ ತಯಾರಿಸಿದ್ದು
ಬಲವಾಗಿ ಎಸೆದ ಬಾಂಬ್ ನಿಂದ
ಸಾವಿರ ಕಿಲೋಮೀಟರ್ ಸ್ವಶಕ್ತಿಯಿಂದ ಸಾಗಿದ್ದು
ಶತ್ರು ಸತ್ತು ಸೋತಾಗ
ಗೆದ್ದೆನೆಂದು ಬೀಗಿದರಲ್ಲೆ
ಸಂತೋಷ ಇರುವುದೆಂದು ಕೊಂಡದ್ದು
ಎಲ್ಲಾವೂ ಬುದ್ಧಿವಂತನಾದ ಮೇಲೆ
ಆ ಯುನಿವರ್ಸಿಟಿ ಈ ಯುನಿವರ್ಸಿಟಿ
ಎಲ್ಲಾ ಬುದ್ಧಿವಂತಾನಾಗಿಸಲು
ಕಲಿತ ಪಾಠ ಜೇಬು ತುಂಬಿಸಲು ಹೇಳಿತು
ಜೀವನದ ಪಾಠಗಳೇ ಬೇರೆ ಇತ್ತು
ತಿಳಿಯುವ ವೇಳೆಗೆ ಮರಣ ಅಪ್ಪಿತ್ತು
ದಡ್ಡನಾಗಿರಬೇಕಿತ್ತು
ಬೆಂಕಿಗೂ ಹೂವಿಗೂ ವ್ಯತ್ಯಾಸ
ಗೊತ್ತಿರಬಾರದಿತ್ತು
ಮುಟ್ಟಿದ್ದಾಗಲೇ ಅನುಭವ ಆಗಬೇಕಿತ್ತು..!
ನಕ್ಕಾಗ ನಕ್ಕು
ಅತ್ತಾಗ ಅತ್ತು
ಬೇಕೆಂದಾಗ ಕುಣಿದು
ಲೋಕದ ಅರಿವಿಲ್ಲದೆ ಮಲಗಬೇಕು
ದ್ವೇಷಕ್ಕೆ ನೆನಪುಗಳಿರಬಾರದು
ಆಸೆಗೆ ನಿರಾಸೆಗಳಿರಬಾರದು
ನನ್ನದು, ನಾನು ಎನ್ನುವ ಅಹಂಗಳಿರಬಾರದು
ತನ್ನದೆ ಜೊಲ್ಲನ್ನು ತಾನೇ ತೆಗೆಯುವಷ್ಟು
ಯೋಚನೆಗಳಿರಬಾರದು…!
ಹೌದು ದಡ್ಡನಾಗಿರಬೇಕಿತ್ತು
ಮುಗ್ಧನಾಗಿರಬೇಕಿತ್ತು…!!?
✍ಯತೀಶ್ ಕಾಮಾಜೆ