ಕೊನೆಗೂ
ಅವಳಿಗೆ ಡೈವೋರ್ಸ್ ಕೊಡಲೇಬೇಕಾಯಿತು.,
ಜೊತೆಗೆ ಜೀವನಾಂಶ..!

ಕೋರ್ಟ್ ತೀರ್ಪು ನೀಡಿತು;
‘ಇಬ್ಬರು ಮಕ್ಕಳಲ್ಲಿ
ಮಗ ನನ್ನ ಜೊತೆಗೆ
ಮಗಳು ಅವಳೊಂದಿಗೆ’.
ಸಮಪಾಲು ಮಾಡಿ ಹಂಚಿತು.
ಆಸ್ತಿಯಲ್ಲೂ ಅಷ್ಟೇ
ಇಂತಿಷ್ಟು ಭಾಗ ನೀಡಲೇ ಬೇಕೆಂದಿತು.
ಅವಳಿಗೆ
ಚಂದ್ರನ ಮೇಲಿನ ಸೈಟ್ ಬೇಕಂತೆ,
ಅದು ಕೊಟ್ಟರೆ
ಬೇರೆ ಕೋಟಿ ಬೇಡಂತೆ..!
ಆಗಲೇ ನೆನಪಾದದ್ದು
ಮದುವೆ ಆಗುವ ಮುನ್ನ
ಪಾರಿಜಾತ ಹೂವಿಗೆ ತೃಪ್ತಿ ಪಟ್ಟದ್ದು..
ಆ ಖುಷಿಯಲ್ಲಿ ನಾ ‘ನೀ ಚಂದ್ರನ ಬೇಕಾದರೆ
ಕೇಳು ಅಂದದ್ದು’..!
ಮನೆ ಕಟ್ಟಲಾಗದ ಸೈಟ್ ಅದು.
ಆದರೂ ಪ್ರತಿಷ್ಠೆಗೆ ಪರ್ಚೇಸ್ ಮಾಡಿದ್ದು,
ಚಂದ್ರನ ಮೇಲೆ ಸೈಟ್ ಇದ್ದವರಲ್ಲಿ
ನಾ ನೂರನೆಯವನು..
ಈಗ ಕಳೆದು ಕೊಳ್ಳುವ ಸ್ಥಿತಿಯಲ್ಲಿರುವವನು.!
‘ನೀನೇ ಇಂದ್ರ ,ಚಂದ್ರ’
ಅಂದವಳಿಗೆ ನಿಜ ಚಂದ್ರನೇ ಬೇಕು.
ನಾನು ಬೇಡ..
‘ಚಂದ್ರನನ್ನೇ ನಿನ್ನ ಕಾಲ ಮುಂದೆ
ನಿಲ್ಲಿಸುವೆ’ ಅಂದವನಿಗೆ
ಅವಳು ಬೇಡ..!
ಒಮ್ಮೊಮ್ಮೆ ಹೀಗೆ
ಜೀವ ಇಲ್ಲದ ವಸ್ತುವಿಗೆ ಬೆಲೆ ಇದ್ದಷ್ಟು
ಹೃದಯಕ್ಕಿಲ್ಲ…!
✍ಯತೀಶ್ ಕಾಮಾಜೆ
