ಅದೆಷ್ಟು ಸೋಪ್
ಹೆಸರ ಹೇಳಿದರೆ ಮುಗಿಯದು..!?
ಆದರ ಕಥೆ ಕೇಳಿ…!?

ನಿನ್ನೆ ತನಕ ಎಲ್ಲಿದೆಯೋ ಅಲ್ಲಿದೆ
ಆರೋಗ್ಯ ಅನ್ನುವ ಸಾಬೂನು
ಬಚ್ಚಲು ಮನೆಯಲ್ಲಿ
ಕರಗಿ ಹೋಗುತ್ತಿರುವಾಗ
ವಯಸ್ಸನ್ನೇ ಮರೆಮಾಚುವ ಸೋಪ್
ಬಂದೇ ಬಿಟ್ಟಿತ್ತು…!
ಆ ನಟಿ ಮಣಿಗಳು
ಉಪಯೋಗಿಸುವ ಸಾಬೂನು ಒಂದಾದರೆ,
ಋಷಿ ಮುನಿಗಳ ಪ್ರೇರಣೆಯಲ್ಲಿ
ತಯಾರಿಸಿದ ಸಾಬೂನೊಂದು..
ಆ ಗಿಡ ಈ ಕಾಯಿ ಸೇರಿಸಿ ಮಾಡಿದ ಪುರಾತನ ವಿದ್ಯೆಯ
ತಿಳಿದು ಮಾಡಿದ ಸೋಪು..
ಶಾಸ್ತ್ರೀಯ ವಿದ್ಯೆಗಳ ಜೊತೆ ವೈಜ್ಞಾನಿಕ ವಿದ್ಯೆಯಿಂದ
ತಯಾರದ ಸೋಪು..
ಎಲ್ಲಾ ನಮ್ಮನ್ನು ಉದ್ದಾರ ಮಾಡಲು.!
ನಮ್ಮ ದೇಹದ ಅರೋಗ್ಯ ಕಾಪಾಡಲು..!?
ಬಟ್ಟೆ ಒಗೆಯಲು ಇವೆ ಬೇರೆ ಬೇರೆ ಸೋಪು,
ಇದು ಇದ್ದಲ್ಲಿ ಕೊಳೆಯ ಮಾತೆಲ್ಲಿ,
ಲಿಂಬೆಯಲ್ಲಿದೆ ಹಠಮಾರಿ ಕೊಳೆ ತೆಗೆಯುವ ಶಕ್ತಿ.,
ಪರಿಮಳ ಯುಕ್ತ,
ಕಳೆ ಮುಕ್ತ..
ಹೀಗೆ ಬಟ್ಟೆ ಚಿಂದಿ ಚಿತ್ರಾನ್ನ
ಆಗುವವರೆಗೆ ತೊಳೆಯುವ ಸೋಪು
ಪಾತ್ರೆ ತೊಳೆಯುವ ಸಾಬೂನುಗಳ
ಪಾತ್ರವೇ ಬೇರೆ..
ಎಣ್ಣೆ ಜಿಡ್ಡು ತೆಗೆಯಲು ಒಂದು,
ಕರಿದ ಪದಾರ್ಥಗಳ ಪಾತ್ರೆ ತೊಳೆಯಲೊಂದು.
ಅದಕ್ಕೆ ಲಿಂಬೆಯಂತೆ ,ನೀಮ್ ಅಂತೆ
ಏನೇನೋ ವೈಜ್ಞಾನಿಕ ಆವಿಷ್ಕಾರವಂತೆ…!
ಬರಬಹುದು ಮಾಡಿದ ಪಾಪವ
ಅಳಿಸುವ ಸೋಪ್ ,
ಹರಿದ ಬಟ್ಟೆಯ ಹೊಲಿಯುವ ಸೋಪ್,
ನಜ್ಜಿದ ಪಾತ್ರೆಯ ಮೂತಿ ಸರಿ ಮಾಡುವ ಸೋಪ್..!
ಸ್ವಚ್ಚ ಮಾಡುವ ಸೋಪೇ
ಕಲುಷಿತ ಮಾಡಿತು,
ಪರಿಮಳ ಸೂಸುವ ಸಾಬೂನೇ
ಕೆಟ್ಟ ವಾಸನೇ ಬೀರಿತು,
ಅರೋಗ್ಯ ಕಾಪಾಡುವ ಸಾಬೂನೇ
ರೋಗ ತಂದಿತು..!
ಯಾವ ಸೋಪಲಿ
ಸ್ನಾನ ಮಾಡಲಿ,
ದೇಹದ ಜೊತೆಗೆ ಮನವ
ಶುದ್ಧ ಮಾಡುವ ಸೋಪು ಬರಲಿ…!
✍ಯತೀಶ್ ಕಾಮಾಜೆ