ಕೊನೆಗೂ
ಸಿಕ್ಕೆ ಬಿಟ್ಟಿತ್ತು
ಹಸಿವಿಗೊಂದು ಮದ್ದು..!

ಹಸಿವಿಂದ ಬೆಂದು ನೊಂದವನೇ
ನಿದ್ದೆ ಬಿಟ್ಟು ಕಂಡು ಹಿಡಿದದ್ದು
ಹಸಿವು ಮುಕ್ತ ಮಾನವ
ಆಗಬೇಕುನ್ನುವ ಮಹದಾಸೆ ಅವನದು
ಪೋಲಿಯೋ ಲಸಿಕೆ ಕೊಡುವ ಹೊತ್ತಲ್ಲೇ
ಈ ಮದ್ದನ್ನು ಎರಡು ಹನಿ ಬಿಡಲಾಗುತ್ತಿತ್ತು
ಮತ್ತೆ ಸಾಯುವ ವರೆಗೆ ಹಸಿವಿಲ್ಲ.
ಹೀಗಾದರೂ ನೆಮ್ಮದಿ ಇರಲೆನ್ನುವ ಬಯಕೆ..
ಕೊನೆಗೂ ಹಸಿವು ಮುಕ್ತ ಮಾನವ..!
ಈಗ ದೇವಸ್ಥಾನಗಳಲ್ಲಿ ಭಿಕ್ಷೆ ಬೇಡುವಂತಿಲ್ಲ
ಹಸಿವಿನ ನೆಪ ನೀಡುವಂತಿಲ್ಲ
ತರಕಾರಿ ಅಂಗಡಿಗಳಿಲ್ಲ
ಬೆಳೆಯುವವರಿಲ್ಲ
ಕೃಷಿ ಬೇಕಾಗಿಲ್ಲ
ರೈತ ಆತ್ಮಹತ್ಯೆ ಪೇಪರ್ ಟೀವಿಯಲ್ಲಿ
ಹೆಡ್ಡಿಂಗ್ ಲೈನ್ ಕಾಣಸಿಗುವುದಿಲ್ಲ..!
ಅದೆಷ್ಟೋ ರೈತರಿಗೆ
ಆಹಾರ ಉತ್ಪನ್ನ ಕಾರ್ಮಿಕರಿಗೆ
ಕೆಲಸಗಳಿಲ್ಲ
ಆದರೂ ಚಿಂತೆ ಇಲ್ಲ
ಏಕೆಂದರೆ ಹಸಿವಿಲ್ಲ..!
ಉದ್ಯೋಗ ಬೇಕಾಗಿಲ್ಲ
ಮನೆಯೊಂದಿದ್ದರೆ ಸಾಕು..!
ಮಕ್ಕಳು ಹಸಿವಿನಿಂದ ಅಳೋದಿಲ್ಲ
ಚಂದಮಾಮನ ತೋರಿಸಬೇಕಾಗಿಲ್ಲ
ಬೆವರು ಸುರಿಸಿ ದುಡಿಯಬೇಕಿಲ್ಲ
ಹಣ್ಣು ಹಂಪಲು ಬೇಕಾಗಿಲ್ಲ
ಮಾವಿನ ಕಾಯಿಗೆ ಕಲ್ಲು ಬಿಸಾಡೋದು ಇಲ್ಲ..!
ಯಾವುದೇ ಆಹಾರ ನೀಡುವ
ಮರದ ಆಗತ್ಯವೇ ಇಲ್ಲ…!
ಆದರೂ
ಆಸೆ ಮುಗಿಯಲಿಲ್ಲ
ಈಗ ಒಂದೇ ಚಿಂತೆ ಮನೆ ಬೇಕು
ಇಲ್ಲದವನಿಗೆ
ಬಿಸಿಲು ಮಳೆ ಚಳಿಯಿಂದ
ರಕ್ಷಣೆ ಪಡೆಯಲು
ಇದ್ದವನಿಗೆ ತನ್ನ ಅಂತಸ್ತು ತೋರಿಸಲು
ಈಗ
ಭಿಕ್ಷುಕ ಭಿಕ್ಷೆ ಬೇಡುವುದು
ಮನೆ ಕಟ್ಟುವ ನೆಪದಿ..
ಉದ್ಯೋಗ ಅರಸಿ ಹೋಗುವುದು
ಮನೆ ಕಟ್ಟಲು
ಆತ್ಮಹತ್ಯೆಯೂ ಹಾಗೆ
ಮನೆ ಕಟ್ಟಿ ಸಾಲ ಕಟ್ಟಲಾಗದೇ..!
ಹಸಿವು ಇಲ್ಲದಿದ್ದರು ನೆಮ್ಮದಿ ಇಲ್ಲ..!
ಹಸಿವು ಎಂದರೆ
ಹೊಟ್ಟೆಗೆ ಸಂಬಂಧಿಸಿದ್ದು
ಮಾತ್ರ ಅಲ್ಲ..!
✍ಯತೀಶ್ ಕಾಮಾಜೆ