ಅಪ್ಪ
ಆಡಿದ್ದ ಆಟ
ಮಗ ಆಡುತ್ತಿಲ್ಲ..!?

ಮೈಯೆಲ್ಲ ಮಣ್ಣಾದರೆ ಆಟ
ಅಮ್ಮನ ಬೈಗುಳದ ನಂತರ ಊಟ
ಅಂಗಳವೇ ಮೈದಾನ
ಮಣ್ಣು, ಕಲ್ಲು, ಹೂ, ತಾಳೆಗರಿ, ಎಲೆ
ಕೋಲು, ನೀರು
ಇವೇ ಆಟದ ಸಾಮಾನು..!
ಮಳೆ ಬಂದರೆ ಬಾವಿ ಆಟ
ಬಿತ್ತುವ ಆಟ,
ಬಿಸಿಲಾದರೆ ಮನೆಯಾಟ,
ದೇವಸ್ಥಾನಕ್ಕೆ ಹೋದರೆ ದೇವರಾಟ,
ಮದುವೆಗ್ಹೋದರೆ ಮದುವೆಯಾಟ,
ಅಜ್ಜಿ ಮನೆಗೆ ಹೋದರೆ ಅಜ್ಜಿಯಾಟ..
ಮಾವಿನ ಮರ
ಗೇರು ಮರ, ನೇರಳೆ ಮರ
ಆಟದಲ್ಲೂ ಪಾಲು ಪಡೆದುಕೊಂಡಿತ್ತು..!
ಮಕ್ಕಳ ಆಟ ನೋಡಲೆಂದೇ
ಅಷ್ಟೊಂದು ಕಾಯಿಗಳು ಬಿಡುತ್ತಿತ್ತು..!?
ಕಾಲ ಬದಲಾಯಿತು
ಮಣ್ಣಲ್ಲಿ ಆಡಲು ಬಿಡುವುದಿಲ್ಲ
ಅಯ್ಯೋ ಮಣ್ಣೇ ಇಲ್ಲ
ಕಾಂಕ್ರೀಟ್ ನೆಲದಲ್ಲಿ..!
ಹುಟ್ಟುತ್ತಲೇ ಚಂದಮಾಮನ ಪರಿಚಯಿಸಿದ್ದೇ
ಮೊಬೈಲ್ ನಲ್ಲಿ
ಊಟ ಮಾಡಿದ್ದು ಮೊಬೈಲ್ ನೋಡಿ
ಆಟನೂ ಮೊಬೈಲ್
ಊಟನೂ ಮೊಬೈಲ್
ದಿನಕ್ಕೊಂದು ಆಟ ಅಪ್ಡೇಟ್ ಆಗುತ್ತೆ..
ಬೆರಳುಗಳೇ ಆಡಿದ್ದು,
ಕಣ್ಣುಗಳೇ ನೋಡಿದ್ದು.
ಕೈ ಕಾಲುಗಳು ಆಡಲೇ ಇಲ್ಲ
ಇದೇ ಅಪ್ಡೇಟ್ ಜನರೇಷನ್..!
ಪರಿಸರವ ಪ್ರೀತಿಸಲು
ಮರೆತದ್ದು ಇಲ್ಲೇ
ಕಡಲನ್ನೂ ನೋಡಿ ಖುಷಿಪಟ್ಟದ್ದು
ಮೊಬೈಲ್ ನಲ್ಲೇ…!
ಎಲ್ಲಾ ಮುಗಿದ ಆಟಗಳು
ಅಂಗಳಗಳಿಲ್ಲದ ಮನೆಯಲ್ಲಿ..!
✍ಯತೀಶ್ ಕಾಮಾಜೆ