ಮನೆಗೂ ಮನಕ್ಕೂ


ಸಂಬಂಧ
ಇದೆಯೇ…!
ಸಣ್ಣದಿರುವಾಗ
ಅದು ಬಣ್ಣವೇ ಕಾಣದ ಮನೆ
ಇದ್ದಿದ್ದೇ ಎರಡು ಕೋಣೆ
ಒಂದು ಚಾವಡಿ
ಇನ್ನೊಂದು ಅಡುಗೆ ಕೋಣೆ
ಇಲ್ಲಿ ಊಟನೂ
ಒಂದೇ ಜಾಗದಲ್ಲಿ
ನಿದ್ದೆಯೂ ಅದೇ ಮೂಲೆಯಲ್ಲಿ
ಇಲ್ಲಿ ಬಾಗಿಲು ಎರಡೇ
ಒಂದು ಮುಂದಿನ ಬಾಗಿಲು
ಇನ್ನೊಂದು ಹಿಂದಿನ ಬಾಗಿಲು
ಅಪ್ಪ ಅಮ್ಮಅಣ್ಣ ತಮ್ಮ
ಕನಸುಗಳು ಒಂದೇ ಕೊನೆಯಲ್ಲಿ
ಹರಡುತ್ತಿತ್ತು.
ಅಣ್ಣನ ಕೈ ತಮ್ಮನ ಎದೆ ಮೇಲಿತ್ತು
ತಮ್ಮನ ಕಾಲು ಅಣ್ಣನ ಹೊಟ್ಟೆ ಮೇಲಿತ್ತು
ಅಷ್ಟರಲ್ಲೇ ಹೊರಳಾಡಿ
ಸೂರ್ಯ ಬರುವ ಹೊತ್ತಿಗೆ
ಹೊದಿಕೆಯು ಅದಲುಬದಲು ಆಗಿತ್ತು..!
ಬಾಂಧವ್ಯ ಹಾಗೆ ಇತ್ತು..
ದೊಡ್ಡದಾದಾಗ
ಬಣ್ಣ ಬಣ್ಣದ ಗೋಡೆ
ಒಂದು ಹಾಲ್
ಒಂದು ಕಿಚನ್
ಒಂದು ಡೈನಿಂಗ್
ಮೂರು ಬೆಡ್ ರೂಮ್
ಮನೆ ಒಂದು ನೂರು ಬಾಗಿಲು.
ಊಟ ಬೇಕಾದಾಗ
ಡೈನಿಂಗ್ ಲೈಟ್ ಆನ್ ಆಗುತ್ತೆ
ನಿದ್ದೆ ಬಂದಾಗ ರೂಮ್
ಬಾಗಿಲು ಕ್ಲೋಸ್ ಆಗುತ್ತೆ
ಅಣ್ಣ ತಮ್ಮನ ರೂಮ್ ಗೆ ಹೊಕ್ಕಾಗ
ನಾನ್ ಸೆನ್ಸ್
ಬಾಗಿಲು ಬಡಿದು ಬರಬೇಕು
ಗೊತ್ತಿಲ್ವ ಅಂದ..!
ತಮ್ಮ ಅಣ್ಣನ ಬಾಗಿಲು ಬಡಿದಾಗ
ಏ ಲೂಸು.
ಒಂದು ಸಾರಿ ಬಡಿದರೆ ಗೊತ್ತಾಗುತ್ತೆ ಅಂದ..!
ಬಾಲ್ಯ ಈಗೊಂದು ನೆನಪು
ಬೆಳೆಯುತ್ತ ದಾಯದಿಗಳಾದದ್ದು
ತಪ್ಪು
ಮನೆಯ ಬಾಗಿಲುಗಳು
ಹೆಚ್ಚಾದ ಹಾಗೆ
ಮನದ ಬಾಗಿಲು
ಗಟ್ಟಿಯಾಗಿ ಮುಚ್ಚಿತೇ ಹೇಗೆ…!
✍ಯತೀಶ್ ಕಾಮಾಜೆ