ಅಮ್ಮ ಮತ್ತು ಗೆಳತಿ
ಮಧ್ಯೆ
ನನ್ನಲ್ಲಿದ್ದ ವ್ಯತ್ಯಾಸಗಳು

ಅಮ್ಮನ ಆರೋಗ್ಯ
ಸರಿ ಇರಲಿಲ್ಲ
ಬೆಳಗ್ಗೆ ಚಾ ತಂದು
ಕೊಟ್ಟಾಗಲೇ ಗೊತ್ತಾಗಿತ್ತು
ಆದರೂ ನಾ ಕೇಳಲಿಲ್ಲ
ಅವಳೇ ಹೇಳಿದಳು
“ಯಾಕೋ ಸ್ವಲ್ಪ ತಲೆನೋವು
ಸರಿ ನಿಲ್ಲೊಕ್ಕಾಗ್ತಿಲ್ಲ” ಎಂದು
ನಾನು ತಿಂಡಿ ಆಯ್ತ ಎಂದು ಕೇಳಿದ್ದೆ..!
ಗೆಳತಿ “ಗುಡ್ ಮಾರ್ನಿಂಗ್”
ಎಂದು
ಕರೆ ಮಾಡಿ ಹೇಳಿದಾಗಲೇ
ಆ ವಾಯ್ಸ್ ನಲ್ಲೇ ಗೊತ್ತಾಗಿತ್ತು
ಅವಳಿಗೆ ಜ್ವರ ಬಂದಿದೆ ಎಂದು..
ವಿಡಿಯೋ ಕಾಲ್ ಮಾಡಿ
ಆರೋಗ್ಯ ವಿಚಾರಿಸಿ ಬಿಟ್ಟೆ
ಮಧ್ಯಾಹ್ನ,ಸಂಜೆ, ರಾತ್ರಿ
ಹೀಗೆ ಸಮಯ ಸಿಕ್ಕಾಗೆಲ್ಲ ಕೇಳಿದ್ದೆ
“ಈಗ ಹೇಗಿದ್ದೀಯ ಚಿನ್ನ”
“ಅಮ್ಮ ಊಟ ಮಾಡಿದ್ರ”
ದಿನದ ಒಂದು ಹೊತ್ತಲ್ಲಿ
ಕೇಳಿದ್ರೆ ಅದೇ ಹೆಚ್ಚು
ದಿನದ ಮೂರು ಹೊತ್ತು
ಮರೆಯದೇ ಕೇಳಿದ್ದೆ
ಗೆಳತಿ ಜೊತೆ
ಅಮ್ಮನ ಹುಟ್ಟಿದ ದಿನ
ಗೊತ್ತೇ ಇಲ್ಲ
ಕೇಳು ಇಲ್ಲ
ಇವಳು ಗೆಳತಿಯಾದ
ಎರಡು ದಿನದೊಳಗೆ
ಕೇಳಿ ಆಗಿದೆ
ನೆನಪೂ ಇದೆ
ಗಿಫ್ಟ್ ಕೊಟ್ಟೂ ಆಗಿದೆ..
ಗೊತ್ತಿಲ್ಲದೆಯೇ
ಅಮ್ಮನ ಬಗ್ಗೆ ಚಾಡಿ ಹೇಳಿದ್ದೆ
ಅವಳ ಜೊತೆ.
ಅವಳ ಒಂದು ವಿಷಯ
ಅಮ್ಮನ ಜೊತೆ ಹಂಚಿರಲಿಲ್ಲ
ಆದರೂ
ಅಮ್ಮ ಅಮ್ಮನಾಗಿಯೇ
ಇದ್ದಳು..
ಇವಳಂತೆ
ಬದಲಾಗುತ್ತಿರಲಿಲ್ಲ…!?
✍ಯತೀಶ್ ಕಾಮಾಜೆ