ಹಣ ಎಂದಾಗ
ಹೆಣನೂ ಬಾಯಿಬಿಟ್ಟಿತ್ತು,
ಭೂ ಲೋಕದಲ್ಲಿ..
ಉದಾಹರಣೆಗಳಿವೆ..!

ನಿನ್ನೆ ಉಸಿರು ಕಾಪಾಡುವ
ಮುಗಿಲೆತ್ತರಕ್ಕೆ ಬೆಳೆದ ಕಟ್ಟಡದಲ್ಲಿ
ಜೀವ ಮರಣದ ಮಧ್ಯೆ
ಒದ್ದಾಡುತ್ತಿರುವಾಗ
ಜೀವ ಉಳಿಸಲು
ಇಂತಿಷ್ಟು ರೇಟ್ ಫಿಕ್ಸ್ ಲಿಸ್ಟ್
ತೋರಿಸಲಾಯಿತು.,
ಆಯ್ಕೆ ನಿಮ್ಮದು..!
ಸತ್ತರೆ ಹಣ ಕಟ್ಟಿ ಹೆಣ
ಕೊಂಡು ಹೋಗಬೇಕು..
ಗ್ಯಾರಂಟಿ ಕೊಡಲ್ಲ..!
ಈಗ ಎಲ್ಲದಕ್ಕೂ ರೇಟ್ ಇದೆ
ತಿನ್ನೋ ಆಹಾರಕ್ಕೆ
ಕುಡಿಯುವ ನೀರಿಗೆ
ಮುಂದೆ ಗಾಳಿಗೂ ಬರಬಹುದು..
ನಿದ್ದೆಗೂ ರೇಟ್ ಫಿಕ್ಸ್ ಮಾಡಿದರೆ
ವಿಸ್ಮಯ ಅನ್ನಬೇಡಿ..
“ಇಲ್ಲಿ ಇಂತಿಷ್ಟು ಹಣಕ್ಕೆ
ನೆಮ್ಮದಿಯ ನಿದ್ದೆ ಭರಿಸಲಾಗುವುದು..”
ಬೋರ್ಡ್ ನೇತು ಹಾಕಬಹುದು
ಕೆಳಗೆ ಸಣ್ಣದಾಗಿ ಬರೆದಿರಬಹುದು
“ನಿಮ್ಮ ನಿಮ್ಮ ಬೆಲೆ ಬಾಳುವ ವಸ್ತುಗಳಿಗೆ
ನೀವೇ ಜವಾಬ್ದಾರರು”..!
ಹಣ ಒಂದಿದ್ದರೆ ಸಾಕು
ನಿಮ್ಮ ಸತ್ತ ಮುತ್ತಾತನನ್ನು
ಮಾತಾಡಿಸುತ್ತೇವೆ.!
ಅಲ್ಲಲ್ಲಿ ತಾತ ಮುತ್ತಾತನಲ್ಲಿ
ಮಾತಾಡಿಸಬಲ್ಲ ಮಾಂತ್ರಿಕರು
ಮುಂದೆ ಬರಬಹುದು..
ಅಲ್ಲಲ್ಲಿ ಜ್ಯೋತಿಷ್ಯಾಲಯ
ಇದ್ದ ಹಾಗೆ
ನಿಮ್ಮ ಕೈ ನೋಡಿ ಭವಿಷ್ಯ ಹೇಳ್ತೀವಿ ಹೇಳಿದಂತೆ
ನಿಮ್ಮ ತಾತ ಮುತ್ತಾತನ ಫೋಟೋ ತೋರಿಸಿ
ಅವರ ಜೊತೆ ಮಾತಾಡಿಸಿ ಕೊಡಲಾಗುವುದೆಂದು.,
ಅಡಿ ಬರಹಗಳಿರಬಹುದು..!?
“ಕಂಡಿಷನ್ಸ್ ಅಪ್ಲೈ”
ದುಡ್ಡು
ಹೆಚ್ಚಾಗಿದೆ..
ಮಾನವೀಯತೆಯನ್ನು ಕಳೆಯುವಷ್ಟು
ಅಹಂನನ್ನು ಹುಟ್ಟು ಹಾಕಿಸುವಷ್ಟು
ಸತ್ಯವನ್ನು ಸಾಯಿಸುವಷ್ಟು..!
ಎಷ್ಟೇ ಹಣ ಇದ್ದರೂ
ಹೆಣ ಆಗಲೇಬೇಕು…!
✍ಯತೀಶ್ ಕಾಮಾಜೆ