ನಾನು
ಸಭ್ಯತೆ ಉಳ್ಳವನಂತೆ
ಕಾಣಬೇಕು
ಹೇಗೆ ತಿಳಿಸುವಿರಾ..!

ಕದ್ದು ತಿಂದದ್ದು
ತಲೆ ಒಡೆದು ಬದುಕಿದ್ದು
ಮೋಸ ಮಾಡುತ್ತ ಸಾಗಿದ್ದು
ಯಾವುದು ಗೊತ್ತಾಗಬಾರದು
ಅಂತಹ ಮುಖವಾಡ
ಇದ್ದರೆ ಹೇಳಿ
ನಿಮಗೊಂದಿಷ್ಟು ಪಾಲು ಕೊಡಲು
ಮರೆಯುವುದಿಲ್ಲ..
ನನ್ನ ಪಾಪ ಪುಣ್ಯದಲ್ಲಿ…!
ಬಡವನ ಹಸಿವಿನಲ್ಲಿ
ಹೆಣ್ಣಿನ ಕಣ್ಣೀರಿನಲ್ಲಿ
ನನ್ನ ಪಾಲಿರಬೇಕು
ನೆನೆದು ಗಹಿ ಗಹಿಸಿ ನಗಬೇಕು
ನಾನೇ ಕಾರಣವೆಂದು ಗೊತ್ತಾಗಬಾರದು
ಅಂತಹ ಉಡುಗೆ ತೊಡುಗೆ ಬೇಕು
ರಕ್ತದ ಕಳೆ ಅಂಟಬಾರದು
ಇದ್ದರೆ ತಿಳಿಸಿಕೊಡಿ
ಖಂಡಿತ ನಿಮಗೆ ಪಾಲು ಕೊಡುತ್ತೇನೆ
ಮಾಡಿದ ಕರ್ಮದಲ್ಲಿ
ನಾನು ಏನು ಮಾಡಿದರು
ಉಪಕಾರ ಮಾಡಿದವರನ್ನು
ಮರೆಯುವುದಿಲ್ಲ
ಸಭ್ಯನಾಗಿ ಕಾಣಲು
ಸಹಾಯ ಮಾಡಿದವರ
ಎಂದು ಮರೆಯುವುದಿಲ್ಲ…
ಏಕೆಂದರೆ
ನನಗೆ
ಸಭ್ಯತೆಯ ಮುಖವಾಡ ಬೇಕು
ಯಾರಲ್ಲಿ ಹೆಚ್ಚಿದೆ…!?
✍ಯತೀಶ್ ಕಾಮಾಜೆ