ವೋಟ್‌ಗೆ ನಿಲ್ಲಬೇಕೆಂದಿರುವೆ,
ನೀವು ಬೆಂಬಲ
ಕೊಡುವಿರೆನ್ನುವ
ಭರವಸೆಯ ಮೇಲೆ..!

ನನ್ನ ಪಕ್ಷದ ಚಿಹ್ನೆ ಹೊಟ್ಟೆ
ಹಸಿದ ಹೊಟ್ಟೆ
ನಿಮ್ಮ ಮತಗಳಿಂದಲೇ
ತುಂಬಿಸ ಬೇಕೆಂದಿರುವೆ
ನೀವು ಜೈಕಾರ ಕೂಗಿ
ಮಾಲೆ ಹಾಕಿ
ನನ್ನ ಆಶ್ವಾಸನೆಗಳಿಗೆ ಕಿವಿಕೊಟ್ಟು,
ನಂಬಿ ಮತ ನೀಡಿ..
ನನಗೂ ಕೆಲವು ಆಸೆಗಳಿವೆ
ಒಂದೆರಡು ಮನೆ
ಒಂದಷ್ಟು ಸೈಟು
ನಾಲ್ಕೈದು ಕಾರು
ಹೀಗೆ ಸಣ್ಣ ಪುಟ್ಟ ಆಸೆಗಳು
ರಾಜಕೀಯದಲ್ಲಿ ಮಾತ್ರ ಇವುಗಳನ್ನು
ಸುಲಭವಾಗಿ ಖರೀದಿಸಬಹುದು
ಇಷ್ಟವರೆಗೆ ಬಂದವರಲ್ಲಿ
ಹೆಚ್ಚಿನವರು ಅದೇ ಮಾಡಿದ್ದು
ನನಗೂ ಒಂದು ಅವಕಾಶ ಕೊಡಿ..
ಆಗಾಗ ಬಜೆಟ್ ನಲ್ಲಿ
ನಿಮ್ಮ ಜಾತಿಗೊಂದಿಷ್ಟು
ನಿಮ್ಮ ಧರ್ಮಕೊಂದಿಷ್ಟು
ನಿಮ್ಮ ಊರಿಗೊಂದಿಷ್ಟು
ಸವಲತ್ತುಗಳನ್ನು ಘೋಷಣೆ ಮಾಡುತ್ತೇನೆ
ವಿಶ್ವ ಬ್ಯಾಂಕ್ ನಲ್ಲಿ
ವಿದೇಶಗಳಲ್ಲಿ ಸಾಲ ಮಾಡಿಯಾದರು
ದೇಶದಲ್ಲಿ ಒಂದಿಷ್ಟು ಕೆಲಸ ಮಾಡಿಸ್ತಿನಿ
ಒಂದಷ್ಟು ನನ್ನ ಕಿಸೆ ತುಂಬಿಸ್ತಿನಿ
ನನಗೊತ್ತು ನೀವು ಮಾತಾಡುವುದಿಲ್ಲ ಎಂದು
ನಾನು ನಿಮ್ಮವನು..!
ಹೊಸ ಹೊಸ ಯೋಜನೆಗಳು
ಹೊಸ ಹೊಸ ಸವಲತ್ತುಗಳು
ಎಲ್ಲಾ ನಿಮಗಾಗಿ
ಸ್ವಲ್ಪ ನನಗಾಗಿ
ನಿಮಗೊತ್ತು ನಾನು ಒಳ್ಳೆಯವನು
ಎಷ್ಟು ತಿಂದರು ಸ್ವಲ್ಪ
ನಿಮಗೆ ನೀಡುವವನು
ವೋಟ್ ಮಾಡ್ತಿರಲ್ವ
ನೆನಪಿಡಿ ನನ್ನ ಪಕ್ಷದ ಚಿಹ್ನೆ ಹೊಟ್ಟೆ
ಹಸಿದ ಹೊಟ್ಟೆ
ಹಸಿದವರ ಹೊಟ್ಟೆ ಅಲ್ಲ….!
✍ಯತೀಶ್ ಕಾಮಾಜೆ