ಈಗೀಗ
ಕೈ ಬೆರಳುಗಳೇ
ಹೆಚ್ಚು ಮಾತಾಡುತ್ತಿತ್ತು
ಧ್ವನಿಯ ಪ್ರಾಮುಖ್ಯತೆ ಕಳೆದು ಕೊಂಡಿತ್ತು..!!
ನಿನಗೆ ಎರಡು ನಾಲಿಗೆ ಎನ್ನುವಂತಿಲ್ಲ
ಯಾಕೆಂದರೆ ಮಾತಾಡುತ್ತಿರುವುದು ಹತ್ತು ಬೆರಳುಗಳು..!!

ಮನೆಯ ಸಾಮಾನುಗಳಿಗೆ
ಅದಾಗಲೇ ಆನ್ ಲೈನ್ ಸಹಕರಿಸುತ್ತಿತ್ತು
ಒಂದೇ ಒಂದು ಆರ್ಡರ್ ಕೊಟ್ಟರೆ ಸಾಕು..
ಬೆರಳ ತುದಿಯಲ್ಲಿ..
ಸೊಂಟದ ,ಎದೆಯ ಸೈಜ್ ಗೊತ್ತಿರಬೇಕಷ್ಟೇ
ನಿಕ್ಕರ್ ನಿಂದ ಹಿಡಿದು ಹೊದಿಕೆವರೆಗೆ
ಆರ್ಡರ್ ಕೊಡಬಹುದು..!
ಅಪ್ಪ ಮನೆ ಮುಟ್ಟುವ ಮೊದಲೇ
ಮೆಸೇಜ್ ಹೋಗುತ್ತಿತ್ತು
ಅರ್ಜೆಂಟಾಗಿ ಹಾಲು
ಫ್ರೆಶ್ ಆಗಿ ಮೀನು..
ಬೇಕೆಂದು..
ಬೇರೆ ಎಲ್ಲಾ ಆನ್ ಲೈನ್ ನಲ್ಲಿ..!
ಟೀಚರ್ ಈಗ ಗಂಟಲು ಹರಿಯುವಂತೆ
ಪಾಠ ಮಾಡುತ್ತಿಲ್ಲ..!
ಎಲ್ಲರ ಕೈಯಲ್ಲಿ ಟ್ಯಾಬ್ ಇದೆ.
ಕರಿ ಬೋರ್ಡ್ ಬದಲು
ಸ್ಮಾರ್ಟ್ ಬೋರ್ಡ್ ಬಂದಿದೆ.
ಟೀಚರಮ್ಮ ಕೈಯಾಡಿಸಿದರೆ ಸಾಕು
ಚಿತ್ರಗಳು ತೆರೆಯುತ್ತದೆ,
ಅವುಗಳೇ ವಿವರಣೆ ಕೊಡುತ್ತದೆ.
ಗುರು ಶಿಷ್ಯರ ಮಧ್ಯೆ ಸಣ್ಣಗೆ ನಗು ಬಿಟ್ಟರೆ
ಮಾತುಕಥೆ ಗಳಿಲ್ಲ..!
ರಜೆ ಬೇಕಾದರೆ ರಜಾ ಅರ್ಜಿ ಸಲ್ಲಿಸಲು
ನಡುಗುತ್ತ ಆಫೀಸ್ ರೂಮ್ ಕಾಲಿಡಲಿಲ್ಲ..
ಒಂದೇ ಒಂದು ಮೆಸೇಜ್ ಸಾಕು
ಅದಕ್ಕೂ ಅಪ್ಲಿಕೇಶನ್ ಇದೆ..!
ಅಪ್ಪ ಅಮ್ಮನದೊಂದು ರೂಮ್
ಮಗನೊಂದು ರೂಮ್
ಇವರ ಮಧ್ಯೆ ಒಂದೊಂದು ಮಾತು
ಮೆಸೇಜ್ ರೂಪದಲ್ಲಿ
ಅಸಲಿಗೆ ಮಗನಿಗೆ ಅಪ್ಪನ
ಗಡಸು ಧ್ವನಿಯ ಪರಿಚಯವೇ ಇರಲಿಲ್ಲ..!
ಅಮ್ಮನ ಮಮತೆಯ ಸ್ವರವು ತಿಳಿದೇ ಇಲ್ಲ..!
ವಿಷದ ಬಾಟಲಿ
ಹತ್ತಿರ ಹಿಡಿದು ಸೆಲ್ಫಿ ಹಾಕಿ
ಸ್ಟೇಟಸ್ ನಲ್ಲೊಂದು ಲೈನ್
ಅದೇ ಹಳೆಯ ಗೆರೆ
“ನನ್ನ ಸಾವಿಗೆ ನಾನೇ ಕಾರಣ”
ಪುಣ್ಯ
ಸಾವೊಂದು ಬದಲಾಗಲಿಲ್ಲ…!
✍ಯತೀಶ್ ಕಾಮಾಜೆ