ಮೋಡಗಳ ಗುದ್ದಾಟದಲಿ ಸಿಡಿಲು ಆರ್ಭಟಿಸಲು ಕಿವಿ ತಮಟೆ ತೂತು….
ಸೀಳಿ ಬಂದ ಕೋಲ್ಮಿಂಚ ಬೆಳಕಿಗೆ
ಕವಿದ ಕತ್ತಲೆಯು ಹೂತು….

ಆರುತಿಹ ಬೆಂಕಿಯ ಊದುಕೊಳವೆಯಲಿ
ಊದಿ ಕಣ್ಣೊರೆಸಲು….
ಏರುತಿಹ ಹಸಿವಿನ ಬೇನೆಗೆ
ಕಂದನ ಅಳುವಿನ ತೊದಲು…..
ಹಾಕಿದ ಮೂರು ಕಲ್ಲುಗಳೆಡೆಯಲಿ
ಧಗ ಧಗ ಉರಿದ ಬೆಂಕಿ….
ಇಟ್ಟ ಮಣ್ಣಿನ ಗಡಿಗೆಯೊಳಗೆ
ಬೇಯ್ದು ಅನ್ನವಾದ ಅಕ್ಕಿ….
ದುಂಡು ಬಟ್ಟಲ ನಡುವೆ ಮುತ್ತಿನಂತಹ
ತಿಳಿಗಂಜಿ ಸಂತಸದಿ ನಕ್ಕಿತು….
ಬರಿದು ಹೊಟ್ಟೆಯ ಒಳಗಣ ಹಸಿವಿನಾರ್ಭಟ ಕ್ಷಣದಲಿ ಇಂಗಿತು….
ಕಿಲ ಕಿಲ ನಗುತ ಕಂದನವ
ಹೊರ ಹೊರಟ ಚೆಲ್ಲಾಟಕೆ….
ಹನಿ ಹನಿ ಹುಸಿನಗೆಯಲಿ ಬಂದನವ
ಮಳೆರಾಯ ಧರಣಿ ಮಂಡಲಕೆ….
ನಲುಗಿದ ಒಡಲು ಮರುಗಿದ ಮನ
ತಂಪಾಗಿ ತಣಿಯಿತು ಉಮ್ಮಳ….
ಸಮರಸದಲಿ ಬೆರೆತು ಒಡಗೂಡುವಿಕೆಯೇ
ಬದುಕಿನ ಜೀವಾಳ….

@ ತುಳಸಿ ಕೈರಂಗಳ್ @

