**** ಆಶಯ ****

ಕಣ್ಣೆತ್ತಿದರೆ ವಿಶಾಲ
ಚಾದರವದು ಬೆಳಕು
ಮಳೆಯ ಆಗಸ….
ಸುತ್ತಲಿಹುದು ಹಚ್ಚ
ಹಸಿರು ಗಿಡ ಮರ
ಬಳ್ಳಿಗಳ ಬೊಕ್ಕಸ….
ಅಶ್ವತ್ಥ ಬೇವು ಮಾವು
ಕುಲಬಾಂಧವರು
ಧರೆಯ ಸಂಸಾರದಲಿ….
ಚರಾಚರ ಬದುಕಿನ
ಚೇತನ ಲಹರಿ ಕೊನರುತ್ತಿದೆ
ಬೀಸುವ ತಂಗಾಳಿಯಲಿ…
ಕರುಳಬಳ್ಳಿ ಬಾಂಧವ್ಯಕ್ಕೆ
ಸರಿಸಮಾನ ಹೊಸೆದಿದೆ
ನಿಸರ್ಗ ಸಂಬಂಧ….
ನಾಳಿನ ಉಸಿರಿಗೆ
ಇಂದಿನ ಹಸಿರು
ಬೆಸೆದಿದೆ ಋಣಾನುಬಂಧ….
ವರ್ತನೆಯ ನರ್ತನಕೆ
ಪರಿವರ್ತನೆಯ ಶೃಂಗಾರದ
ಲೇಪನ ಕರ್ಮದಲಿ….
ಅರಳಲು ಹವಣಿಸಿದ
ಅತ್ಯಮೂಲ್ಯ ಸಂಪತ್ತು
ನೆಲಕ್ಕುರುಳದಿರಲಿ….
ಬೇರು ಮೇಲಾಗಿ ಚದುರಿ
ಚೆಲ್ಲದಿರಲಿ ಬಾನೆತ್ತರ
ಮರದ ಜೀವ….
ಮುರಿದ ಗೂಡುಗಳು
ತತ್ತರಿಸಿ ಚಿತ್ರಿಸದಿರಲಿ
ಮಾಮರದ ಇಹವ….
ಮನುಜ ಏಕಾಂಗಿಯಲ್ಲ
ಪ್ರಕೃತಿದತ್ತ ಸಕಲ
ಜೀವರಾಶಿಗಳ ಒಡನಾಡಿ….
ತರುಲತೆಗಳ ಜತನದಿ
ಕಾಪಾಡುತ ತುಂಬೋಣ
ಪ್ರಕೃತಿಮಾತೆಯ ಉಡಿ….

@ ತುಳಸಿ ಕೈರಂಗಳ್ @

