ಒಂದು ಕಾಡಲಿ ಮೇಕೆ ಎರಡು
ಗೆಳೆತನದ ಸವಿಯುಂಡವು
ಸ್ನೇಹದಲ್ಲಿಯೇ ಸ್ವರ್ಗವಿಹುದು
ಎನುವುದನು ಮನಗಂಡವು

ನೋಡಿ ಇವುಗಳ ಪ್ರಾಣಿ ಸಂಕುಲ
ಉರಿಯ ನುಂಗುತ ನಡೆಯಿತು
ಮೈತ್ರಿ ಕೆಡಿಸುವ ಕುಹಕದಾಟಕೆ
ಸಂಚನೊಂದನು ಹುಡುಕಿತು
ಜಗಳವಾಡಿಸಿ ಸ್ನೇಹ ಕದಡಲು
ಪಣವನಂದೇ ತೊಟ್ಟವು
ಒಬ್ಬರೆ ದಾಟುವ ಊರ ಸೇತುವೆ
ಮೇಲೆ ಎರಡನು ಬಿಟ್ಟವು
ಎದುರು ಬಂದರೂ ಮೇಕೆಗಳು
ತಾವಾಡಿಕೊಂಡವು ಕಿವಿಯಲಿ
ಜಗಳವಾಡದೆ ದಾರಿ ಹುಡುಕಿದ
ಉಪಾಯ ಮೆದ್ದವು ಸವಿಯಲಿ
ಒಂದು ಮೇಕೆಯು ಮಂಡೆಯೂರಿ
ತಾನು ಕುಳಿತಿತು ಹರುಷದಿ
ಇನ್ನೊಂದು ಮೇಕೆಯು ಮೇಲೆ ಜಿಗಿದು
ಇತ್ತ ಬಂದಿತು ಸರಸದಿ
ಮಣ್ಣುಗೂಡಿದ ತಮ್ಮುಪಾಯವ
ಹಳಿದು ನಡೆದವು ಪಶುಗಳು
ಖುಷಿಯ ಹೀರುತ ಮೇಕೆ ನಡೆದವು
ಸ್ನೇಹ ಪ್ರೇಮದ ಶಿಶುಗಳು

ನೀ.ಶ್ರೀಶೈಲ ಹುಲ್ಲೂರು ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301