ಆಡ ಹೋದ ಮಗನು

ಬಂದು ತೊಡೆಯನೇರಿದ
ಹಾಡನೊಂದು ಹಾಡು
ಎಂದು ಒಡನೆ ಕೇಳಿದ
ಹಾಡದಿರುವ ಎದೆಗೆ
ಒರಗಿ ಬಿಡದೆ ಬೇಡಿದ
ಹಾಡದಿರೆ ‘ಬಿಡೆನು ನಾನು’
ಎಂದು ಕಾಡಿದ
ಮಾಡಲೇನು ನಾನು
ಈಗ ಹಾಡನೆಲ್ಲಿ
ಹುಡುಕಿ ತರಲಿ?
ಕಾಡುತಿರುವ ಮಗನ
ಹಟ ಕದಾವ ದಾರಿ ತೋರಲಿ?
ಹಕ್ಕಿಯೊಂದು ಹಾರಿ ಬಂತು
ಗಕ್ಕನೆಂದು ಗಿಡದಿ ಕುಳಿತು
ಉಕ್ಕುವೆದೆಯಲುಲಿದು ಮಣಿದು
ಹಾಡತೊಡಗಿತು
ತಟ್ಟನೆದ್ದ ನನ್ನ ಪುಟ್ಟ
ತೊಡೆಯನಿಳಿದು ಓಡಿಬಿಟ್ಟ
ಹಕ್ಕಿಯೊಡನೆ ತಾನು ಸೇರಿ
ನನ್ನ ಹಾಡು ಮರೆತುಬಿಟ್ಟ

#ನೀ.ಶ್ರೀಶೈಲ ಹುಲ್ಲೂರುಮಂದಹಾಸ ಬಸವೇಶ್ವರ ವೃತ್ತಜಮಖಂಡಿ – 587301