ಚಳಿಗಾಲದಿ ಅಕಬರನು
ವಿಹಾರ ಬಯಸಿದ
ರಾಣಿ ತನ್ನ ಜೊತೆಗೆ ಬರಲು
ಖುಷಿಯಲಿ ನಡೆದ

ಕೊಳದಿ ಇಳಿದ ರಾಣಿ
ಒಡನೆ ಬೆಚ್ಚಿಬಿದ್ದಳು
ನೀರು ಬಹಳ ತಂಪು ಎಂದು
ಹೊರಗೆ ಬಂದಳು
ರಾತ್ರಿ ಪೂರ್ತಿ ನೀರಿನಲ್ಲಿ
ಇರುವ ಜಟ್ಟಿಗೆ
ಬಹುಮಾನ ನೀಡಿಬಿಡು
ಎಂದಳು ರಾಜಗೆ
ವಿಷಯ ತಿಳಿಸಲವನು
ಡಂಗುರವ ಹೊಡೆಸಿದ
ಒಪ್ಪಿ ಬಂದ ಮುದುಕನನ್ನು
ಕೊಳದಿ ಇಳಿಸಿದ
ರಾತ್ರಿಯೆಲ್ಲ ಮುದುಕನು
ನೀರಲ್ಲೆ ಕಳೆದನು
ಮುಂಜಾನೆ ಆಸ್ಥಾನದಿ
ಬಂದು ನಿಂತನು
ಹೇಗೆ ಸಾಧ್ಯವಾಯಿತೆಂದು
ರಾಜ ಕೇಳಿದ
‘ರಾಜದೀಪ ನೋಡುತಲಿ’
ಎಂದವನು ಹೇಳಿದ
ಬಹುಮಾನ ನೀಡಬೇಡಿ
ಎಂದನೊಬ್ಬನು
ಏಕೆ? ಎನುವ ರಾಜನಿಗೆ
ಅವನಿಂತೆಂದನು
ಚಳಿಯಾಗಿಲ್ಲವನಿಗೆ
ದೀಪದ ಬಿಸಿಗೆ
ಅದುಕಾರಣ ಬಹುಮಾನ
ಬೇಡ ಅವನಿಗೆ
ಬಹುಮಾನ ಕೊಡದೆ ರಾಜ
ಹಾಗೆ ಕಳಿಸಿದ
ಕೋಪಗೊಂಡ ಬೀರಬಲ್ಲ
ಮನದಿ ಶಪಿಸಿದ
ಮಾರನೆ ದಿನ ಆಸ್ಥಾನಕೆ
ಬಾರದೆ ಉಳಿದ
ರಾಜ ಅವನ ಮನೆಗೆ
ರಾಜಭಟರ ಕಳಿಸಿದ
ಕಿಚಡಿ ಮಾಡಿ ಬರುವೆನೆಂದು
ಬೀರಬಲ್ಲ ಹೇಳಿದ
ಸಂಜೆತನಕ ಬಾರದಿರಲು
ರಾಜ ತೆರಳಿದ
ರಾಜ ಹೋಗಿ ನೋಡಲಲ್ಲಿ
ಕಂಡಿತು ವಿಚಿತ್ರವು
ನೇತಾಡುವ ಗಡಿಗೆ ಮೇಲೆ!
ಕೆಳಗಡೆ ಉರಿಯು!!
ಬೀರಬಲ್ಲ ಇದೇನು
ನಿನ್ನ ಹುಚ್ಚಾಟವು?
ಕೆಳಗಿಡು ಗಡಿಗೆಯನು
ಆಗುವುದು ಕಿಚಡಿಯು
ಕೊಳದಿಂದ ತುಂಬ ದೂರ
ರಾಜ ದೀಪವು
ಮುದುಕನಿಗೆ ತಟ್ಟಿತ್ಹೇಗೆ
ಹೇಳಿ ಶಾಖವು?
ರಾಜನ ನುಡಿಗವನಿತ್ತ
ಜಾಣ ಉತ್ತರ
ಅದನು ಕೇಳಿ ರಾಜನಾದ
ಒಳಗೆ ತತ್ತರ
ಕಾಲಿಗೆ ತಾ ಬುದ್ಧಿ ಹೇಳಿ
ಹೊಕ್ಕನರಮನೆ
ಮುದುಕಗೆ ಬಹುಮಾನವಿತ್ತು
ಕುಳಿತ ಸುಮ್ಮನೆ

#ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ

