ಅದಾವ ನರಿ ಕದಿಯಿತೋ
ಗುಳಿಕೆನ್ನೆಯ ಚೆಲುವ?
ಗುಳಿಯ ತುಂಬ ಮೌನದಾಟ
ತಿಂದು ತೇಗಿತೊಲವ


ಕೆನ್ನೆಗೊಳದ ಬಳಿಯೆ
ಒಂದು ಪುಟ್ಟ ಬಾತು ಕೂತು
ಅಲೆಯ ಭರಕೆ ಬೆದರಿ
ತಾನು ನಿಂತುದೇಕೆ ಸೋತು?
ಕಾಣದಿರುವ ಖುಷಿಯನೆಲ್ಲ
ಸುರಿದು ನಲಿದೆ ಎದೆಯಲಿ
ಎಷ್ಟು ಭಾವ ಎಷ್ಟು ಬಣ್ಣ
ನನ್ನ ಮನದ ಪೊದೆಯಲಿ
ಬೇಕು ಎನುವ ಮೊದಲೆ ಎಲ್ಲ
ತುಂಬಿ ತುಂಬಿ ನೀಡಿದೆ
ಗುಳಿಯ ಚೆಲುವು ಚೆಲ್ಲವರಿಸಿ
ಸುಧೆಯ ಗಂಧ ತೀಡಿದೆ
ಬಾರೆ ಚಿನ್ನ ಗುಳಿಯ ತುಂಬ
ಮುತ್ತು ಮಳೆಯ ಸುರಿಸುವೆ
ಬೇಗೆ ಏಕೆ ಕೆನ್ನೆ ತುಂಬ?
‘ಪಿರುತಿ’ ಹೊಳೆಯ ಹರಿಸುವೆ

#ನೀ ಶ್ರೀಶೈಲ ಹುಲ್ಲೂರು