Tuesday, February 3, 2026

*ಅನುರಣನ*

ತತ್ತರಿಸಿ ಒತ್ತರಿಸಿ ಬರುವ
ದುಃಖದುಂಡೆಗಳ ನುಂಗಿ
ನೀರು ಕುಡಿದು ತೇಗಿದ್ದೇ ಬಂತು
ಹೊಟ್ಟೆ ತುಂಬಲಿಲ್ಲ
ಕೆಟ್ಟುದನು ಸುಟ್ಟು
ಮೆಟ್ಟಿ ಮೂಲೆಗಟ್ಟುವುದೇ
ಮನದ ಗುರಿಯಾಯಿತು

ಎಲ್ಲರೆದುರು ಹಲ್ಲುಗಿಂಜಿ
ನಂಜು ನುಂಗಿದ ನಂಜುಂಡನಂತೆ
ಗಿರಿಗಿಟ್ಟೆಯಾದದ್ದೇ ಬಂತು
ಪಸೆಯಾರಲಿಲ್ಲ
ಬೆಟ್ಟದ ಕನಸುಗಳ
ನುಣ್ಣಗೆ ಬೋಳಿಸುವುದೇ
ತನುವ ಸಿರಿಯಾಯಿತು

ಹರಣಗೊಂಡೆದೆಯ ಜರ್ಜರಿತ
ಹರಿಣಗಳ ಗಾಯ ಒರೆಸಿ
ಮುದ್ದು ಸವರಿದ್ದೇ ಬಂತು
ಮುದಗೊಳ್ಳಲಿಲ್ಲ
ಹದ ಬೆದೆಯ ಬೆಂಬತ್ತಿ
ಮೋಂಬತ್ತಿಯಾಗುರಿವುದೇ
ಬದುಕ ನೆಲೆಯಾಯಿತು

ಭೋರ್ಗರೆವ ಅಡ್ಡಾದಿಡ್ಡಿ
ಮರ್ಮರಗಳ ಅಡ್ಡಗಟ್ಟಿ
ಅಣೆಕಟ್ಟುಗಳ ಕಟ್ಟಿದ್ದೇ ಬಂತು
ಗಟ್ಟಿಗೊಳ್ಳಲಿಲ್ಲ
ತೂಬುಗಳ ತೆರೆದು
ತೂರಿಬಿಟ್ಟ ನೀರೇ ಸೋರಿ
ಜೀವ ಸೆಲೆಯಾಯಿತು

 

ನೀ.ಶ್ರೀಶೈಲ ಹುಲ್ಲೂರು

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...