ಕಾಣದ, ದಾರಿಗಾಣದ
ದೇವರು ದೆವ್ವಗಳಿಗಾಗಿ
ಅಂಡಲೆವ ಭಂಡ ಮನವೇ!

ಅವಕಾಶದ ಮಡುವಿನಲಿ ಮುಳುಗಿ
ಆಗಸದಾಸೆಯ ಹೆದೆಗೆ ಏಣಿಯನಿರಿಸಿ
ಏರಲಾಗದ ಇಳಿಯಲಾಗದ
ಅತಂತ್ರಾವಸ್ಥೆಯಲೂ ಸ್ವತಂತ್ರ
ನೆಂಬ ಹಮ್ಮು ಬಿಮ್ಮುಗಳನು
ಆಂತರ್ಯದಲೆ ಮೈಗೂಡಿಸಿಕೊಂಡ
ನೀ ಮಹಾ ಖದೀಮ!
ಪ್ರಾಣ,ಶರೀರದ ಮೇಲೆಲ್ಲ ಎಗರಿ
ಎಲ್ಲೆಂದರಲ್ಲಿ ಕಪಟ ಮೋಸ ವಂಚನೆಯ
ಸೆರಗ ಹಾಸಿ ಅದರ ಮೇಲೆಯೇ
ಸತ್ಯ ನ್ಯಾಯ ಸಾಚಾತನದ
ಸವಾರಿಗೈದು ಒಳಿತು ಕೆಡುಕಿನ
ಭೇದಗಾಣದ ನಲ್ಮೊಗವ ಮೇಲೆತ್ತಿ
ಬಾನಿಗೆ ನಾದ ರವಾನಿಸುವ ನಿಜ ಶ್ವಾನ!
ಕರ್ಪೂರ ಗಂಧ ನೈವೇದ್ಯದಮಲನೆಲ್ಲ
ಒಳ ಹೊರಗೆ ತುಂಬಿ ಗಲೀಜು ಗಟಾರ
ಕೊಚ್ಚೆಯನೆಲ್ಲ ಎಲ್ಲೆಂದರಲ್ಲಿ ಹರಡಿ
ಬಾಣತುದಿಯ ಮಾಂಸವನೆಲ್ಲ ನೆಕ್ಕಿ
ಹೆಕ್ಕಿ ಉಕ್ಕೇರುವಾಗಲೇ ತಣ್ಣೀರು
ಸಿಂಪಡಿಸಿ ನೊರೆವಾಲ ಮದವ
ನಿಳಿಸೋ ಮಹಾ ಮಾಯಾವಿ!
ಎಲ್ಲರೆದೆಗಡಲಲೂ ನಿಲ್ಲದೆ ನಾಟ್ಯವಾಡಿ
ಅತಿಯಾಳದಲೆಲ್ಲ ತನ್ನಿರುವನಡಗಿಸಿ
ಏಳುಬೀಳುಗಳ ತಾಳಕೆ ಕುಣಿಸಿ ಮಣಿಸಿ
ಮೇಲೇಳದಂತೆ ಹೆಡೆಮುರಿಯ ಕಟ್ಟಿ
ಎದ್ದರೂ ಆ ಕ್ಷಣವೇ ಕುಗ್ಗಿ ಬಗ್ಗಿ ತಗ್ಗಿ
ರಸಾತಳದಲೇ ಉಸಿರುಗಟ್ಟಿಸಿ ಜೀವ
ರಾಶಿಗಳನೆಲ್ಲ ಕಪಿಮುಷ್ಟಿಯಲದುಮಿ
ಮನದುಂಬಿ ಮೆರೆವ ಮರ್ಕಟ!
#ನೀ.ಶ್ರೀಶೈಲ ಹುಲ್ಲೂರು