ಹರೆಯವ ಕರಗಿಸಿ
ಮರಮರ ಮರುಗಿಸಿ
ಸಾಗಿದೆ ಏತಕೆ
ನನ್ನೊಲವೆ?
ಮೈಯನು ಕಾಯಿಸಿ
ಮನವನು ಬೇಯಿಸಿ
ಬೀಗಿದೆ ತೋಯಿಸಿ
ಓ ಚೆಲುವೆ!

ತಳಮಳವಿಲ್ಲದ
ಕಳವಳದೈಸಿರಿ
ಚಿಗುರಿಸಿ ಎರಗಿದೆ
ಇಂಪಿನಲಿ!
ಒಲವನು ಕಾಣದೆ
ನೆಲವನು ನೋಡದೆ
ನಡೆದೆ ನೀ ಏತಕೆ
ಬಿಂಕದಲಿ?
ಗಾಳಿಯ ತೇಲಿಸಿ
ಹಾಳೆಯ ಹರವಿದೆ
ಬರೆಯದ ಲೇಖನಿ
ಕೈಗಿರಿಸಿ!
ಹೊಸ ಬೆಳಕಿನ
ಹೊಂಗಿರಣವ ಸೂಸಿದೆ
ನೋಡುತ ನಿಂದಿಹೆ
ನನ್ನರಸಿ!
ಕಾಡಿದ ಎದೆಯಲಿ
ಮೂಡಿದ ಕವನವ
ಕಳಿಸಿಹೆ ನಿನ್ನನೆ
ನಾ ಬಯಸಿ!
ಸೊಗಸಿನ ಸರಸಕೆ
ಕಾದಿದೆ ಮೈಮನ
ನಲಿದು ಉಲಿದು ಬಿಡು
ಮನತಣಿಸಿ
#ನೀ. ಶ್ರೀಶೈಲ ಹುಲ್ಲೂರು